ಹೊಸದಿಗಂತ ವರದಿ,ಮಂಗಳೂರು:
ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡವು ಕುಸಿತಗೊಂಡು ಬೃಹತ್ ಪ್ರಮಾಣದ ಮಣ್ಣು ಹಳಿಯ ಮೇಲೆ ಬಿದ್ದಿರುವುದರಿಂದ ಕಳೆದ ೪ ದಿನಗಳಿಂದ ನಿರಂತರವಾಗಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಮರೋಪಾದಿಯಲ್ಲಿ ಹಳಿ ಸಮರ್ಪಕತೆಗೆ ನೈರುತ್ಯ ರೈಲ್ವೆ ಇಲಾಖೆ ಶ್ರಮವಹಿಸುತ್ತಿದೆ.
ಸೋಮವಾರವೂ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಸಮರೋಪಾದಿಯಲ್ಲಿ ಭಾಗವಹಿಸಿದರು. ೪೩೦ಕ್ಕೂ ಅಧಿಕ ಕಾರ್ಮಿಕರು, ಜೆಸಿಬಿ ಮತ್ತು ಹಿಟಾಚಿಗಳ ಸಹಾಯದಿಂದ ಮಣ್ಣು ತೆರವು ಕಾರ್ಯಾರಣೆ ನಡೆಯಿತು. ಪರಿಹಾರ ಸಾಮಾಗ್ರಿಗಳೊಂದಿಗೆ ರಕ್ಷಣಾ ತಂಡವು ಸ್ಥಳದಲ್ಲಿ ಸನ್ನದ್ಧವಾಗಿದೆ.
ಹಳಿಯ ಮೇಲೆ ಬೃಹತ್ ಪ್ರಮಾಣದ ಮಣ್ಣಿನ ರಾಶಿ ಬಿದ್ದುದರಿಂದ ತೆರವು ಕಾರ್ಯಾರಣೆಯನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದ್ದರೂ ಕಾಮಗಾರಿ ಸಂಪೂರ್ಣವಾಗಿಲ್ಲ.ಈ ಕಾರಣದಿಂದ ಸೋಮವಾರವೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಅಲ್ಲದೆ ಕೆಲವು ರೈಲುಗಳನ್ನು ಮಂಗಳವಾರವೂ ರದ್ದುಗೊಳಿಸಲಾಗಿದೆ. ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.ಕಾರ್ಯಾಚರಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ರೈಲ್ವೆ ಇಲಾಖೆ ಮಾಡಿದೆ.
ಸೋಮವಾರ, ಮಂಗಳವಾರ ರದ್ದುಗೊಂಡ ರೈಲುಗಳು:
ಗುಡ್ಡ ಕುಸಿತದಿಂದಾಗಿ ಸೋಮವಾರ ಮತ್ತು ಮಂಗಳವಾರ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್(೧೬೫೯೫), ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ (೧೬೫೮೫), ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್(೧೬೫೮೬), ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇ? ಎಕ್ಸ್‌ಪ್ರೆಸ್ (೦೭೩೭೭), ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್(೦೭೩೭೮), ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(೧೬೫೧೨) ರದ್ದುಗೊಂಡಿದೆ.
ಸೋಮವಾರ ರದ್ದುಗೊಂಡ ರೈಲುಗಳು:
ಸೋಮವಾರ ಕಾರವಾರ – ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್(೧೬೫೯೬), ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್(೧೬೫೧೬), ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್(೧೬೫೭೫), ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್(೧೬೫೧೧) ರದ್ದುಗೊಳಿಸಲಾಗಿತ್ತು.