ನೇಕಾರರ ಆತ್ಮಹತ್ಯೆಗೆ 5 ಲಕ್ಷ ರೂ. ಪರಿಹಾರ ನೀಡಲು ಪ್ರಯತ್ನ: ಸಚಿವ ಶಿವಾನಂದ ಪಾಟೀಲ್ ಭರವಸೆ

ಹೊಸದಿಗಂತ ವರದಿ, ಬೆಂಗಳೂರು:

ಕೈಮಗ್ಗ ನೇಕಾರರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೃತರ ಕುಟುಂಬದವರಿಗೆ ಐದು ಲಕ್ಷ ರೂ. ಪರಿಹಾರ ವಿತರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ವಿಧಾನಪರಿಷತ್ತಿಗೆ ಭರವಸೆ ನೀಡಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಭಿಮಾ ಯೋಜನೆಯಲ್ಲಿ 2 ಲಕ್ಷ ರೂ. ಪರಿಹಾರ ವಿತರಣೆ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯ ವಿಮಾ ಕಂತನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಈ ಎರಡು ಲಕ್ಷ ರೂ.ಗಳೊಂದಿಗೆ ಸಿಎಂ ಪರಿಹಾರ ನಿಧಿಯಿಂದಲೂ ಮೂರು ಲಕ್ಷ ರೂ. ಪರಿಹಾರ ವಿತರಣೆ ಮಾಡುವ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡುವ ಯೋಜನೆ ಜಾರಿಯಲ್ಲಿ ಇರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ 25 ಮೃತ ನೇಕಾರರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ 1.25 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ವಿತರಣೆ ಯೋಜನೆ ಮುಂದುವರಿಕೆಗೆ ಆರ್ಥಿಕ ಇಲಾಖೆ ಅನುಮೋದನೆಗೆ ಪ್ರಯತ್ನಿಸಲಾಗುವುದು ಎಂದರು.

ಆತ್ಮಹತ್ಯೆ ಮಾಡಿಕೊಂಡ ನೇಕಾರನ ಪತ್ನಿಗೆ ಪಿಂಚಣಿ ಅಥವಾ ಮೃತರ ಮಕ್ಕಳಿಗೆ ಉಚಿತಿ ಶಿಕ್ಷಣ ನೀಡುವ ಯೋಜನೆ ಇಲ್ಲ. ಆದರೆ 2,500 ರೂ.ಗಳಿಂದ 11 ಸಾವಿರ ರೂ.ಗಳವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 2022-23ನೇ ಸಾಲಿನಲ್ಲಿ 3,664 ವಿದ್ಯಾರ್ಥಿಗಳಿಗೆ 1.63 ಕೋಟಿ ರೂ. ಹಾಗೂ 2023-24ನೇ ಸಾಲಿನಲ್ಲಿ 3,689 ವಿದ್ಯಾರ್ಥಿಗಳಿಗೆ 1.99 ಕೋಟಿ ರೂ. ವಿದ್ಯಾರ್ಥಿ ವೇತನವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!