ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತೆ ಗಾಜಾ ಪಟ್ಟಿಯಾದ್ಯಂತ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 404 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾಂಬ್ ದಾಳಿಯು ಜನವರಿಯಿಂದ ಜಾರಿಯಲ್ಲಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ.
ಇತ್ತ ಕದನ ವಿರಾಮ ಉಲ್ಲಂಘಿಸಿ ಮತ್ತೆ ಯುದ್ಧ ಆರಂಭಿಸಿರುವ ಇಸ್ರೇಲ್ ಗೆ ತಕ್ಕ ಉತ್ತರ ನೀಡುತ್ತೇವೆ. ಈ ದಾಳಿ ಒತ್ತೆಯಾಳುಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಹಮಾಸ್ ಎಚ್ಚರಿಸಿದೆ.
ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಗಳಲ್ಲಿ ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ ಮತ್ತು ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ಈವರೆಗೆ 326 ಮೃತದೇಹಗಳು ದಾಖಲಾಗಿವೆ. ಆದರೆ, ಇನ್ನೂ ಹಲವಾರು ಶವಗಳು ಧ್ವಂಸಗೊಂಡ ಸ್ಥಳದಡಿಯಲ್ಲಿ ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು ಸಚಿವಾಲಯ ಹೇಳಿದೆ.
ಈ ಮಧ್ಯೆ, ಕಾರ್ಯಾಚರಣೆಯು ಮುಕ್ತವಾಗಿದೆ ಮತ್ತು ಅದನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈಜಿಪ್ಟ್ ಮತ್ತು ಕತಾರ್ ಜೊತೆಗೆ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುನ್ನಡೆಸುತ್ತಿರುವ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್, ಒತ್ತೆಯಾಳುಗಳನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು ಅಥವಾ ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.