ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಲ್ಲೂ ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲ ಯುವಕರು ಪುಂಡಾಟ ನಡೆಸಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ಆಧರಿಸಿ ಯುವಕರ ಪತ್ತೆ ಹಚ್ಚಿರುವ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸೆ.28ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಮಂಗಳೂರಿನ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ಯುವಕರು ಹಸಿರು ಬಾವುಟ ಪ್ರದರ್ಶಿಸಿ ಪುಂಡಾಟ ಮಾಡಿದ್ದರು. ಅಲ್ಲದೆ ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಹಾಕಿಕೊಂಡು ಹುಚ್ಚಾಟ ನಡೆಸಿದ್ದರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗದ ಈದ್ ಮೆರವಣಿಗೆ ವೇಳೆ ನಡೆದ ಗಲಾಟೆ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಯುವಕರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಉಳ್ಳಾಲ ಪೊಲೀಸ್ ಠಾಣಾಧಿಕಾರಿಯಿಂದ ನೋಟೀಸ್ ಜಾರಿಯಾಗಿದೆ.