ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ದಿಬಾಲಾಂಗ್ ನಿಲ್ದಾಣದಲ್ಲಿ ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಗುರುವಾರ ಹಳಿತಪ್ಪಿವೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇಂದು ಮಧ್ಯಾಹ್ನ 3.55ಕ್ಕೆ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ್ದು, ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹಳಿತಪ್ಪಿದ ಬೋಗಿಗಳಲ್ಲಿ ಪವರ್ ಕಾರ್ ಮತ್ತು ರೈಲಿನ ಎಂಜಿನ್ ಸೇರಿದೆ.
ಲುಮ್ಡಿಂಗ್-ಬದರ್‌ಪುರ್ ಸಿಂಗಲ್ ಲೈನ್ ಬೆಟ್ಟದ ವಿಭಾಗದಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.