ಹೊಸದಿಗಂತ ವರದಿ, ಅಂಕೋಲಾ:
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗೇರಿ ಹರಿಕಂತ್ರವಾಡದ ನಿವಾಸಿ ವಿಶ್ರಾಂತ ನೇಮು ಹರಿಕಂತ್ರ(25) ಕಾಣೆಯಾಗಿರುವ ಯುವಕನಾಗಿದ್ದು ಮಗನನ್ನು ಹುಡುಕಿ ಕೊಡುವಂತೆ ತಾಯಿ ಗೀತಾ ಹರಿಕಂತ್ರ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವಿಶ್ರಾಂತ ಹರಿಕಂತ್ರ ಸೆಪ್ಟೆಂಬರ್ 29 ರಂದು ಬಡಗೇರಿಯ ತನ್ನ ಮನೆಗೆ ಆಗಮಿಸಿದ್ದು ಅಕ್ಟೋಬರ್ 1 ರಂದು ಕಾರವಾರದ ಬೈತಕೋಲ್ ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ ಎನ್ನಲಾಗುತ್ತಿದ್ದು ನಂತರ ತನ್ನ ತಾಯಿಗೆ ಕರೆ ಮಾಡಿ ತಾನು ಸ್ನೇಹಿತರೊಂದಿಗೆ ಛತ್ತೀಸಗಡದ ರಾಯಗಡಕ್ಕೆ ಹೋಗುವುದಾಗಿ ತಿಳಿಸಿದ್ದು ಅಕ್ಟೋಬರ್ 4 ರಂದು ಬೇರೆಯವರ ಮೊಬೈಲ್ ಪೋನಿನಿಂದ ತಾಯಿಗೆ ಕರೆ ಮಾಡಿ ತನ್ನ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿಸಿದ್ದ.
ಮತ್ತೆ ಮಗನ ಕರೆ ಬರದಿರುವ ಕಾರಣ ಅಕ್ಟೋಬರ್ 7 ರಂದು ತಾಯಿ ವಿಕ್ರಾಂತ ಮತ್ತು ಸ್ನೇಹಿತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ, ಮಗ ಬರುವನೆಂದು ಸ್ವಲ್ಪ ದಿನ ಕಾದ ತಾಯಿ ಮಗನ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಪೊಲೀಸ್ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದು ಕಾಣೆಯಾಗಿರುವ ವಿಕ್ರಾಂತ ಕುರಿತು ಯಾವುದೇ ಮಾಹಿತಿ ಲಭ್ಯವಾದರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸಲು ಪ್ರಕಟಣೆ ಹೊರಡಿಸಿದ್ದಾರೆ.