ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಗಟ್ಟಲೆ ಕತ್ತಲೆಯಲ್ಲಿ ಮುಳುಗಿದ್ದ ವೃದ್ಧೆಯ ಮನೆ, ಮನದಲ್ಲಿ ಬೆಳಕು ಮೂಡಿದೆ. ದಶಕಗಳ ಕಾಲ ಕತ್ತಲೆಯೊಂದಿಗೆ ಹೋರಾಡಿದ ಅಜ್ಜಿಯ ಜೀವನ ಈಗ ಪ್ರಕಾಶಮಾನವಾಗಿದೆ. ಸಿನಿಮಾಗಳಲ್ಲಿ ಬರುವ ಕಥೆಗಳು ನಿಜ ಜೀವನದಲ್ಲಿ ಎದುರಾದರೆ ಬಹಳ ರೋಚಕ ಎನಿಸುತ್ತವೆ. ಅಂತೆಯೇ ಉತ್ತರ ಪ್ರದೇಶದ 70 ವರ್ಷದ ನೂರ್ಜಹಾನ್‌ಳ ಕಥೆಯೂ ಇದೇ ಆಗಿದೆ. ಬುಲಂದ್‌ಶಹರ್ ಹೆಚ್ಚುವರಿ ಎಸಿಪಿ ಅನುಕೃತಿ ಶರ್ಮಾ ಈ ಕಥೆಯನ್ನು ತಮ್ಮ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ, ಇದು ಶಾರುಖ್ ಖಾನ್ ಅಭಿನಯದ ಸ್ವದೇಶ್ ಸಿನಿಮಾವನ್ನು ನೆನಪಿಸುವಂತಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯವರಾದ ನೂರ್ಜಹಾನ್ ತಮ್ಮ ಚಿಕ್ಕ ಮನೆಯಲ್ಲಿಯೇ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಮನೆಯೂ ಚಿಕ್ಕದು ಜೊತೆಗೆ ಬೆಳಕಿಲ್ಲದೆ ಕತ್ತಲೆಯಲ್ಲಿ ಬದುಕು ನೂಕುವ ಪರಿಸ್ಥಿತಿ ಇತ್ತು. ಈ ವಿಷಯ ತಿಳಿದ ಅನುಕೃತಿ ಶರ್ಮಾ ಅಧಿಕಾರಿಗಳೊಂದಿಗೆ ಮಾತನಾಡಿ ನೂರ್ಜಹಾನ್ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದರು. ಸಿಬ್ಬಂದಿ ಸಮೇತ ಸ್ವತಃ ವೃದ್ಧೆಯ ಮನೆಗೆ ತೆರಳಿ ವಿದ್ಯುತ್ ಮೀಟರ್, ಬಲ್ಬ್, ಫ್ಯಾನ್ ಅಳವಡಿಸಿದರು.
ನೂರ್ಜಹಾನ್ ಅವರು ತಮ್ಮ ಮನೆಯಲ್ಲಿ ಮೊದಲ ಬಾರಿಗೆ ಬಲ್ಬ್ ಬೆಳಗಿದಾಗ ಅವರ ಮುಖದಲ್ಲಿ ಮೂಡಿದ ನಗು ತನಗೆ ಹೆಚ್ಚಿನ ತೃಪ್ತಿ ನೀಡಿದೆ ಎಂದು ಅನುಕೃತಿ ಶರ್ಮಾ ಬರೆದುಕೊಂಡಿದ್ದಾರೆ. ನೂರ್ಜಹಾನ್ ತನ್ನ ಭುಜವನ್ನು ತಟ್ಟಿ ತನ್ನ ಮನೆಯಲ್ಲಿ ಬೆಳಕನ್ನು ಹರಡಿದ್ದಕ್ಕಾಗಿ ಧನ್ಯವಾದ ತಿಳಿಸಿದ ಕ್ಷಣ ಭಾವುಕತೆಯಿಂದ ಕೂಡಿತ್ತು. ಶರ್ಮಾ ಕೂಡ ನೂರ್ಜಹಾನ್ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಕರಿಸಿದ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಜೂನ್ 26 ರಂದು ತಮ್ಮ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೊಗೆ ಲಕ್ಷಗಟ್ಟಲೆ ವೀಕ್ಷಣೆಗಳು ಮತ್ತು 25,000 ಕ್ಕೂ ಹೆಚ್ಚು ಲೈಕ್ ಗಳಿಸಿದೆ. ವೃದ್ಧೆಯ ಮನೆಗೆ ಬೆಳಕು ತಂದಿದ್ದಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದೀರ ನೀವು ಸೂಪರ್ ಮೇಡಂ, ನೀನು ಪಸರಿಸಿದ ಬೆಳಕು ಬಡ ತಾಯಿಯ ಮನೆ ಮಾತ್ರವಲ್ಲ.. ಅವಳ ಬದುಕನ್ನೂ ಬೆಳಗಿಸಿದೆ. ನೀವು ಹೀಗೆ ಹೆಚ್ಚು ಒಳ್ಳೆಯ ಕೆಲಸಗಳನ್ನು ಮಾಡುತ್ತಿರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.