ಚುನಾವಣೆ ಅಲರ್ಟ್: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಪರಿಶೀಲನೆ

ಹೊಸದಿಗಂತ ವರದಿ,ಮದ್ದೂರು : :

ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್‌ಅವರು ಜಿಲ್ಲಾ ಗಡೀಭಾಗದ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್‌ಪೋಸ್ಟ್‌ಗೆ ಖುದ್ದು ಭೇಟಿ ನೀಡಿ ಶುಕ್ರವಾರ ವಾಹನಗಳ ಪರಿಶೀಲನೆ ನಡೆಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿದ್ದ ಚೆಕ್‌ಪೋಸ್ಟ್‌ಗೆ ಬೆಳಗ್ಗೆ 11.30ರ ವೇಳೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹಾಗೂ ಎಸ್ಪಿ ಯತೀಶ್ ಸುಮಾರು ಒಂದು ಗಂಟೆಗಳ ಕಾಲ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರು.
ವಾಹನಗಳ ಓಡಾಟ, ದಾಖಲು ಪುಸ್ತಕ ಹೇಗೆ ಮಾಡಬೇಕು ಎಂಬುದರ ಬಗ್ಗೆ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿತರಾಗಿರುವ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತದಾರರಿಗೆ ಆಮಿಷವೊಡ್ಡುವಂತಹ ವಸ್ತುಗಳು, ಕಂಟೈನರ್ ವಾಹನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಗಿಸುವ ಸಾಧ್ಯತೆಗಳಿವೆ. ಹೀಗಾಗಿ ಅನುಮಾನಾಸ್ಪದ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬೇಕು. ಬಳಿಕ ಮುಂದಿನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಸೂಚಿಸಿದರು.
ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಚೆಕ್‌ಪೋಸ್ಟ್‌ಗಳಲ್ಲಿ 24*7 ಮಾದರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಗೋಪಾಲಕೃಷ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚೆಕ್‌ಪೋಸ್ಟ್‌ ತೆರೆದಿದ್ದರಿಂದ ಇಲ್ಲಿಯವರೆಗೆ ಆರೇಳು ಅಪಘಾತಗಳು ಸಂಭವಿಸಿದ್ದು, ಚುನಾವಣಾ ಸಿಬ್ಬಂದಿಗಳು ಭಯ ಭೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಅನಿವಾರ‌್ಯತೆ ಎದುರಾಗಿದೆ. ಹೀಗಾಗಿ ರಸ್ತೆಗೆ ಅಡ್ಡಲಾಗಿ ಮತ್ತಷ್ಟು ಬ್ಯಾರಿಕೇಟ್ ಹಾಗೂ ಸಿಗ್ನಲ್ ಲೈಟ್ ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳಿ ಸೂಚನೆ ನೀಡಿದರು.
ಚುನಾವಣಾಧಿಕಾರಿ ಆರ್. ನಾಗಾರಾಜು, ಸಹಾಯಕ ಚುನಾವಣಾಧಿಕಾರಿ ಟಿ.ಎನ್. ನರಸಿಂಹಮೂರ್ತಿ, ಸಿಪಿಐ ಸಂತೋಷ್, ಪಿಎಸ್‌ಐ ಸಿದ್ದರಾಜು, ನಿರ್ಮಿತಿ ಕೇಂದ್ರದ ಛೀಪ್ ಇಂಜಿನಿಯರ್ ನರೇಶ್, ಚೆಕ್‌ಪೋಸ್ಟ್‌ ಮುಖ್ಯಸ್ಥ ಮಂಜುನಾಥ ನಾಯ್ಡು, ಚುನಾವಣಾ ಶಾಖೆಯ ಪವನ್ ಹಾಗೂ ಸಿಬ್ಬಂದಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!