ಕೋಲಾರ ಕಠಾರಿಪಾಳ್ಯದ ಹೂವಿನ ಕರಗ ಮಹೋತ್ಸವ: ಮನಸೂರೆಗೊಂಡ ನೃತ್ಯ!

ಹೊಸದಿಗಂತ ವರದಿ, ಕೋಲಾರ

ನಗರದ ಕಠಾರಿಪಾಳ್ಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿದ್ದು, ಶುಕ್ರವಾರವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಅಗ್ನಿಕುಂಡ ಪ್ರವೇಶ ಮಾಡಿತು.
ನೂರಾರು ವರ್ಷಗಳಿಂದ ಅಪಾರ ಜನಮನ್ನಣೆ ಗಳಿಸಿರುವ ಕಠಾರಿಪಾಳ್ಯದ ಹೂವಿನ ಕರಗ ಮಹೋತ್ಸವದಲ್ಲಿ ಬೇತಮಂಗಲದ ಪ್ರಸಿದ್ದ ಕರಗದ ಪೂಜಾರಿ ನಾಗರಾಜ್ ಅವರ ಪುತ್ರ ಕೃಷ್ಣಮೂರ್ತಿ ಈ ಬಾರಿಯೂ ಕರಗ ಹೊತ್ತಿದ್ದು, ತಮ್ಮ ಅದ್ಬುತ ನೃತ್ಯ ಪ್ರದರ್ಶನದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.
ಕರಗ ಹೊತ್ತಿದ್ದ ಕೃಷ್ಣಮೂರ್ತಿ ಮೊದಲು ದೇವಾಲಯದ ಮುಂಭಾಗದ ಆವರಣದಲ್ಲಿ ನಿರ್ಮಿಸಿದ್ದ ಸುಂದರ ವೇದಿಕೆಯಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ಸೇರಿದ್ದ ಬೃಹತ್ ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು.
ವೀರ ಕುಮಾರರ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ಕರಗ ನೃತ್ಯಕ್ಕೆ ಜನರ ಶಿಳ್ಳೆ ಮತ್ತು ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು.
ಕರಗದ ಪೂಜಾರಿ ನಾಗರಾಜ್ ತಮ್ಮ ಬಹುಕಾಲದ ಅನುಭವವನ್ನು ತಮ್ಮ ಮಗನಿಗೆ ಧಾರೆಯೆರೆದಿದ್ದು, ಸಾರ್ಥಕವಾಗಿ ಇಡೀ ನಗರದ ಜನತೆ ಅವಿಸ್ಮರಣೀಯ ಅನುಭವದಲ್ಲಿ ಮುಳುಗಿ ಹೋಯಿತು.
ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರ ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ಕರಗವನ್ನು ಶನಿವಾರ ರಾತ್ರಿ ೮ ಗಂಟೆಗೆ ಹೊತ್ತಿದ್ದು,ಇಡೀ ರಾತ್ರಿ ತಲೆಯ ಮೇಲೆ ಹೊತ್ತು ನಗರದ ಡೂಂಲೈಟ್‌ವೃತ್ತ, ಧರ್ಮರಾಯನಗರ ಬಡಾವಣೆ,ಕಠಾರಿಪಾಳ್ಯ ಶಾಲಾ ಆವರಣ ಮತ್ತಿತರರೆಡೆ ವೇದಿಕೆಯಲ್ಲಿ ನೃತ್ಯದ ಮೂಲಕ ಜನಮನ ಸೆಳೆದರು.
ಇದಾದ ನಂತರ ನಗರದ ವಿವಿಧ ಬಡಾವಣೆಗಳಲ್ಲಿನ ಎಲ್ಲಾ ರಸ್ತೆಗಳಲ್ಲೂ ಕರಗ ಸಂಚರಿಸಿದಾಗ ಪ್ರತಿ ಮನೆಯ ಮುಂಭಾಗವೂ ಪೂಜೆ ಮಾಡಿ ಶ್ರದ್ಧಾಭಕ್ತಿಗಳಿಂದ ಬೀಳ್ಕೊಡಲಾಯಿತು.
ಕರಗ ಮಹೋತ್ಸವ ಭಾನುವಾರ ಸಂಜೆ ೩ ಗಂಟೆ ವೇಳೆಗೆ ಕಠಾರಿಪಾಳ್ಯದ ಧರ್ಮರಾಯಸ್ವಾಮಿ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ಮಾಡುವ ಮೂಲಕ ದೇವಾಲಯ ಸೇರಿತು.
ಕರಗದ ವೈಶಿಷ್ಟ್ಯಮೂಲ ಕರಗವಿದು
ಕರ್ನಾಟಕ ರಾಜ್ಯದಲ್ಲಿ ಆನೇಕಲ್, ಕೋಲಾರ ಮತ್ತು ಬೆಂಗಳೂರು ಈ ಮೂರು ಕಡೆಗಳಲ್ಲಿ ಮಾತ್ರ ಕರಗ ನಡೆಯುತ್ತಿದ್ದು, ಈ ಮೂರು ಮೂಲ ಕರಗಗಳಾಗಿದ್ದು, ಇದರಲ್ಲಿ ಕೋಲಾರದ ಕಠಾರಿಪಾಳ್ಯದ ಕರಗವೂ ಒಂದಾಗಿದೆ.
ಕೋಲಾರದ ಈ ಧರ್ಮರಾಯ ದೇವಾಲಯದಲ್ಲಿರುವ ದ್ರೌಪತಿ ದೇವಿ ವಿಗ್ರಹವು ಉಧ್ಬವ ಮೂರ್ತಿಯಾಗಿದ್ದು, ಈ ಬಗ್ಗೆ ಅನುಮಾನಗೊಂಡ ಬ್ರಿಟೀಷರು ಪರಿಶೀಲಿಸಿ ಇದು ಉಧ್ಬವ ಮೂರ್ತಿ ಎಂಬುದನ್ನು ದೃಡಪಡಿಸಿಕೊಂಡ್ಡಿದ್ದು ಸಹಾ ಇತಿಹಾಸದಲ್ಲಿ ದಾಖಲಾಗಿದೆ.
ನಗರ ಠಾಣೆ ಪೊಲೀಸರು ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಧರ್ಮರಾಯ ದೇವಾಲಯದ ಆಡಳಿತ ಸಮಿತಿಯ ಗೌಡರಾದ ರಾಘವೇಂದ್ರ ಮತ್ತು ಯಜಮಾನರಾದ ಅರ್ಜುನಪ್ಪನವರ ಪಾಪಣ್ಣ ನೇತೃತ್ವ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!