ಬಾಡಿಗೆ ಕಾರಲ್ಲಿ ಚುನಾವಣಾ ಪ್ರಚಾರ: ಎಲ್ಲರ ಗಮನ ಸೆಳೆದರು ಸುಳ್ಯದ ಅಭ್ಯರ್ಥಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ, ನಾಮಪತ್ರ ಸಲ್ಲಿಕೆ ಮುಕ್ತಾಯವಾದಂತೆ ಎಲ್ಲ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಇಡೀ ದಿನ ಬಿಸಿಲಿನಲ್ಲಿ ರೋಡ್‌ಶೋ ಮಾಡಿ ‘ನಮಗೆ ವೋಟ್ ಮಾಡಿ’ ಎನ್ನುತ್ತಿರುವ ಅಭ್ಯರ್ಥಿಗಳು, ಬಿಸಿಲಿನ ಬೇಗೆ ತಡೆಯೋಕಾಗದೆ ಎಸಿ ಕಾರ್, ಅಷ್ಟೇ ಯಾಕೆ ಪ್ರಚಾರಕ್ಕಾಗಿಯೇ ಡಿಸೈನ್ ಮಾಡಿದ ಕೂಲಿಂಗ್ ಕಾರ್, ಕ್ಯಾರಾವಾನ್‌ಗಳನ್ನು ಬಳಸುತ್ತಿದ್ದಾರೆ.

ಆದರೆ ಇಲ್ಲೊಬ್ಬ ಅಭ್ಯರ್ಥಿ ಎಲ್ಲರಿಗಿಂತ ವಿಭಿನ್ನವಾಗಿದ್ದು, ತಮ್ಮ ಬಳಿ ಸ್ವಂತದ ವಾಹನ ಇಲ್ಲದ ಕಾರಣ ಬಾಡಿಗೆ ಕಾರ್ ಪಡೆದು ಪ್ರಚಾರ ನಡೆಸುತ್ತಿದ್ದಾರೆ.

ಹೌದು, ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರತಿ ಮುರುಳ್ಯ ತಮ್ಮ ಬಳಿ ಸ್ವಂತ ಕಾರ್ ಇಲ್ಲದ ಕಾರಣ ಬಾಡಿಗೆ ಕಾರ್‌ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ರಾಜ್ಯದಲ್ಲಿಯೇ ಅತ್ಯಂತ ಬಡ ಅಭ್ಯರ್ಥಿಯಾದ ಭಾಗೀರತಿ ಅವರು ನೈಜವಾಗಿ, ಪರಿಸ್ಥಿತಿ ಇರುವಂತೆ ತೋರಿಸಿಕೊಂಡಿದ್ದಾರೆ.

ಪ್ರಚಾರಕ್ಕೆಂದು ಅಭ್ಯರ್ಥಿಗಳು ಲಕ್ಷ ಲಕ್ಷ ಸುರಿಯುವಾಗ ಭಾಗೀರತಿ ಅವರು ಕೈಯಲ್ಲಿ 40 ಸಾವಿರ ರೂಪಾಯಿ ಇಟ್ಟುಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ತಾವು ಕಷ್ಟಪಟ್ಟು ಕೂಡಿಸಿದ್ದ 20 ಸಾವಿರ ರೂಪಾಯಿ ಹಾಗೂ ತನ್ನ ತಂಗಿಯಿಂದ 20 ಸಾವಿರ ರೂಪಾಯಿಯನ್ನು ಪ್ರಚಾರಕ್ಕೆಂದು ಪಡೆದಿದ್ದಾರೆ.

ಬೀಡಿ ಕಾರ್ಮಿಕೆ, ಅಂಗನವಾಡಿ ಶಿಕ್ಷಕಿ, ಟೈಲರಿಂಗ್ ಹಾಗೂ ಹೈನುಗಾರಿಕೆ ನಡೆಸುತ್ತಿರುವ ಭಾಗೀರತಿ ಅವರು ಟಿಕೆಟ್ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ದು ಹೀಗೆ..

ಬಡತನದಿಂದ ಬಂದಿದ್ದರೂ ಪಕ್ಷ ಕೊಟ್ಟಿದ್ದ ಪ್ರತಿ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ್ದೇನೆ, ನನ್ನ ಸೇವಾಮಾನೋಭಾವವನ್ನು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ಸುಳ್ಯ ಭಾಗದಲ್ಲಿ ನನ್ನಂಥ ಬಡ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದು ಎಲ್ಲರಿಗೂ ಆಶ್ಚರ್ಯವಾಗಿದೆ ಎಂದಿದ್ದಾರೆ.

ನನ್ನ ತಂದೆ ತಾಯಿಯೂ ಚುನಾವಣೆಗೆ ನಿಂತು ಸೋಲನ್ನು ಅನುಭವಿಸಿದ್ದಾರೆ. ಆದರೆ ಈ ಬಾರಿ ನಾನು ಗೆಲುವು ಸಾಧಿಸುತ್ತೇನೆ ಏಕೆಂದರೆ ನಾನು ಮಾಡಿದ ಕೆಲಸಗಳು ಕಣ್ಣೆದುರೇ ಇವೆ, ನಮ್ಮ ಕಾರ್ಯಕರ್ತರು ಜನರಿಗೆ ಬಿಜೆಪಿ ಮೇಲೆ ನಂಬಿಕೆ ಬರುವಂಥ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಪಕ್ಷದ ಹಿರಿಯರು ಹೇಗೆ ಹೇಳುತ್ತಾರೋ ಹಾಗೆ ಮುಂದೆಯೂ ಮಾಡಿಕೊಂಡು ಹೋಗುತ್ತೇನೆ ಎಂದು ಭಾಗೀರತಿ ಹೇಳಿದ್ದಾರೆ.

ಪಕ್ಷ ಸಂಘಟನೆ ಕಾರ್ಯಪಡೆ ಚುರುಕಿನ ಕೆಲಸ ಮಾಡುತ್ತಿದೆ, ಕಾಣದ ರೀತಿ ಮಹಿಳೆಯರು ಎಲ್ಲಾ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಗೆಲುವು ಖಂಡಿತಾ, ಬರೀ ಗೆಲುವು ಅಲ್ಲ, ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!