ಚುನಾವಣಾ ನೀತಿ ಸಂಹಿತೆ: ಹಾವೇರಿಯಲ್ಲಿ ದಾಖಲೆ ಇಲ್ಲದ 5.17 ಲಕ್ಷ ರೂ. ನಗದು ವಶ

ಹೊಸದಿಗಂತ ವರದಿ,ಹಾವೇರಿ:

ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ರೂ.೫,೧೭,೫೪೦ ಮೊತ್ತವನ್ನು ಹಾವೇರಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚೆನ್ನಪ್ಪ ಹಾಗೂ ಶಿಗ್ಗಾಂವ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮಹ್ಮದ್ ಖಿಜರ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗುತ್ತಲ ಹೋಬಳಿ ವ್ಯಾಪ್ತಿಯ ಕಂಚಾರಗಟ್ಟಿ ಚೆಕ್‌ಪೋಸ್ಟ್‌ನಲ್ಲಿ ಮಾ.೨೫ರ ಮಧ್ಯರಾತ್ರಿ ೧೧.೩೦ ಗಂಟೆ ಸಮಯದಲ್ಲಿ ಯಾವುದೇ ದಾಖಲೆ ಇಲ್ಲದೆ ಹಾವೇರಿ ತಾಲೂಕಿನ ರವಿ ಕರೂರ ಶಿರಗುಪ್ಪ ಎಂಬ ವ್ಯಕ್ತಿ ರೂ.೨.೭೮ಲಕ್ಷ ಹಣ ಸಾಗಿಸುತ್ತಿದ್ದರು.

ಇದೇ ಸಮಯದಲ್ಲಿ ಆಂಧ್ರಪ್ರದೇಶದ ಬೋದೆಪಾಡು ತಾಲೂಕಿನ ಶ್ರೀನಿವಾಸ ವೆಂಕಟರಾಮುಡು ಎಂಬ ವ್ಯಕ್ತಿ ರೂ.೫೩ಸಾವಿರಗಳನ್ನು ಕಾರಿನಲ್ಲಿ ಕೊಂಡ್ಯೊತ್ತಿರುವ ಸಂದರ್ಭದಲ್ಲಿ ಹಣ ವಶಪಡಿಸಿಕೊಂಡು ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಗುತ್ತಲ ಹೋಬಳಿಯ ಉಪ ತಹಶೀಲ್ದಾರ, ರಾಜಸ್ವ ನಿರೀಕ್ಷಕರು, ಎಸ್.ಎಸ್.ಟಿ. ತಂಡ ಕಾರ್ಯಾಚರಣೆ ಮಾಡಿ ದಾಖಲೆ ಇಲ್ಲದ ಹಣ ವಶಪಡಿಸಿಕೊಂಡಿದೆ.

ತಡಸ ಚೆಕ್‌ಪೋಸ್ಟ್‌ನಲ್ಲಿ ನಗದು ವಶ: ಮಾ.೨೬ರಂದು ತಡಸ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ರೂ.೧.೮೬ಲಕ್ಷ ಮೊತ್ತವನ್ನು ವಶಪಡಿಸಿಕೊಂಡು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.
ರಘುರಾಂ ಶೆಟ್ಟಿ ಎಂಬ ವ್ಯಕ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ತಡಸ ಚೆಕ್‌ಪೋಸ್ಟ್‌ನಲ್ಲಿ ಕಾರಿನ ತಪಾಸಣೆ ವೇಳೆ ದಾಖಲೆ ಇಲ್ಲದೆ ಹಣ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಯಾವುದೇ ವ್ಯಕ್ತಿ ರೂ.೫೦ ಸಾವಿರಕ್ಕಿಂತ ಹೆಚ್ಚು ನಗದನ್ನು ಸೂಕ್ತ ದಾಖಲೆಗಳಿಲ್ಲದೆ ತೆಗೆದುಕೊಂಡು ಹೋಗುವಂತಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!