ವಲಸಿಗ ಮತದಾರರಿಗಾಗಿ ರಿಮೋಟ್ ವೋಟಿಂಗ್ ಯಂತ್ರ ಅಭಿವೃದ್ಧಿಪಡಿಸಿದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚುನಾವಣೆಯಲ್ಲಿ ದೇಶೀಯ ವಲಸೆ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಭಾರತದ ಚುನಾವಣಾ ಆಯೋಗವು ಅನೇಕ ಕ್ರಮ ಕೈಗೊಳ್ಳುತ್ತಿದ್ದು ಇದರ ಭಾಗವಾಗಿ ದೇಶೀಯ ವಲಸೆ ಮತದಾರರಿಗಾಗಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇದರ ಪ್ರೋಟೋ ಟೈಪ್‌ (ಮಾದರಿ)ಯನ್ನು ಚುನಾವಣಾ ಆಯೋಗ ಅಭಿವೃದ್ಧಿ ಪಡಿಸಿದ್ದು ಜನವರಿ 16 ರಂದು ಇದರ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿದೆ. ಒಂದು ವೇಳೆ ಈ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವು ಒಪ್ಪಿಗೆಯಾದರೆ ವಲಸೆ ಮತದಾರರು ತಮ್ಮ ಹಕ್ಕು ಚಲಾಯಿಸಲು ತಮ್ಮ ತವರು ಜಿಲ್ಲೆಗೆಪ್ರಯಾಣಿಸುವ ಅಗತ್ಯವಿರುವುದಿಲ್ಲ.

ಈ  ರಿಮೋಟ್ ಮತದಾನದ ಪರಿಕಲ್ಪನೆಯ ಟಿಪ್ಪಣಿಯನ್ನು ಚುನಾವಣಾ ಆಯೋಗವು ನೀಡಿದ್ದು ಅದನ್ನು ಕಾರ್ಯಗತಗೊಳಿಸುವಲ್ಲಿ ಕಾನೂನು, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಿದೆ.

ಸಾರ್ವಜನಿಕ ವಲಯದ ಉದ್ಯಮದಿಂದ ಅಭಿವೃದ್ಧಿಪಡಿಸಲಾದ ಈ ರಿಮೋಟ್ ಇವಿಎಂ ಮೂಲಕ ಒಂದೇ ಮತಗಟ್ಟೆಯಿಂದ 72 ಕ್ಷೇತ್ರಗಳನ್ನು ನಿರ್ವಹಿಸಬಹುದಾಗಿದೆ.

ಪ್ರಸ್ತುತ ಅನೇಕ ಯುವಕರು ನಗರದೆಡೆಗೆ ವಲಸೆ ಬಂದಿದ್ದಾರೆ.ಅಲ್ಲದೇ ಅನೇಕರು ಕೆಲಸ, ಕಾರ್ಯದ ನಿಮಿತ್ತ ಹಲವು ಬಾರಿ ತಮ್ಮ ನಿವಾಸಗಳನ್ನು ಬದಲಾಯಿಸಬೇಕಾಗಿ ಬರುತ್ತದೆ. ಅಂಥಹವರು ಅನೇಕ ಕಾರಣಗಳಿಂದ ತಮ್ಮ ಮೂಲ ಕ್ಷೇತ್ರದ ಮತದಾರರಪಟ್ಟಿಯಲ್ಲಿ ಹೆಸರು ತೆಗೆಸಲು ಹಿಂಜರಿಯುತ್ತಾರೆ. ಅಲ್ಲದೇ ಕೆಲವೊಮ್ಮೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ಹಕ್ಕು ಚಲಾಯಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಗಳನ್ನು ದೂರ ಮಾಡಿ ಚುನಾವಣಾ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಚುನಾವಣಾ ಆಯೋಗವು ಈ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ ಎನ್ನಲಾಗಿದೆ.

ಚುನಾವಣಾ ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸಲು ರಿಮೋಟ್ ಮತದಾನವು ಪರಿವರ್ತನೆಯ ಉಪಕ್ರಮವಾಗಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!