ಚುನಾವಣಾ ಆಯೋಗದ ಆದೇಶ ಪಾಲಿಸಿ: ಮನೋಜ್ ಕುಮಾರ್ ಮೀನಾ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದಿಂದ ಸಿದ್ಧತೆಗಳು ನಡೆದಿದ್ದು, ಚುನಾವಣಾ ಆಯೋಗ ಹೊರಡಿಸುವ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ಮಂಗಳವಾರ ಮಾಹಿತಿ ಪಡೆದು ಅವರು ಮಾತನಾಡಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಅಭಿಯಾನ ನಡೆಯುತ್ತಿದ್ದು, 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಪಡಿತರ ಚೀಟಿ ಪಡೆದಿರುವ ಕುಟುಂಬಗಳ ಸಂಖ್ಯೆ ಮತ್ತು ಕುಟುಂಬದವರ ವಿವರವನ್ನು ಪರಿಶೀಲಿಸಿದರೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದರು. ಹಾಡಿಗಳು ಸೇರಿದಂತೆ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಭೇಟಿ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆಯುವುದು ಮತ್ತಿತರ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಬೇಕು. ದಿನಾಂಕ, ಸ್ಥಳ, ಮತ್ತಿತರ ಸಂಬಂಧ ಜತನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಅರ್ಹರೆಲ್ಲರೂ ಮತದಾನ ಮಾಡಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಯುವ ಮತದಾರರ ಹೆಸರು ನೋಂದಣಿಗೆ ಹೆಚ್ಚಿನ ಗಮನಹರಿಸಬೇಕು. ಮತದಾರರ ಗುರುತಿನ ಚೀಟಿ ವಿತರಣೆಗೆ ಕ್ರಮವಹಿಸಬೇಕು. ಸಹಾಯವಾಣಿ 1950 ಕರೆಗಳಿಗೆ ಸ್ಪಂದಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚಿಸಿದರು. ವಿಕಲಚೇತನ ಮತದಾರರಿಗೆ ಮತಗಟ್ಟೆಯಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವುದು. ಇವಿಎಂ ಮತ್ತು ವಿವಿಪಿಎಟಿ(ವಿವಿಪ್ಯಾಟ್) ಇರುವ ಕಡೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದರು.

ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಮತಗಟ್ಟೆ ಸ್ವೀಪ್ ಮೂಲಕ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸುವುದು, ಸಖಿ ಮತಗಟ್ಟೆ ಸ್ಥಾಪಿಸುವುದು ಹೀಗೆ ಹಲವು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುವಂತೆ ಮನೋಜ್ ಕುಮಾರ್ ಮೀನಾ ಅವರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮತಗಟ್ಟೆ ಪರಿಷ್ಕರಣೆ ಸಂಬಂಧ ಬಿಎಲ್‍ಒಗಳಿಗೆ ತರಬೇತಿ ನೀಡಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮನೆ ಮನೆಗೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಲಾಗಿದೆ ಎಂದರು. ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಮಾಲೋಚನೆ ನಡೆಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ 250 ಹಾಡಿಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತಿತರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

‘ಜಿಲ್ಲೆಯಲ್ಲಿ 5,61,942 ಜನಸಂಖ್ಯೆಯಲ್ಲಿ 4,39,039 ಮಂದಿ ಮತದಾರರಿದ್ದಾರೆ. 1,449 ಮಂದಿ ಸೇವಾ ಮತದಾರರಿದ್ದಾರೆ. 542 ಪೊಲೀಂಗ್ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.’ ಎಂಟು ಚೆಕ್’ಪೋಸ್ಟ್: ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತ ಜಗದೀಶ್ ನಾಯಕ್ ಅವರು, ಕುಟ್ಟ, ಮಾಕುಟ್ಟ, ಕರಿಕೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುತ್ತದೆ. ನಾಲ್ಕು ಸಹಾಯವಾಣಿ ಕೇಂದ್ರ ತೆರೆಯಲಾಗುತ್ತದೆ. ಮೊಬೈಲ್ ಸ್ಕ್ವಾಡ್ ನಿಯೋಜಿಸಲಾಗುತ್ತದೆ. ಅಂತರರಾಜ್ಯ ಪೊಲೀಸರ ಜೊತೆ ಸಮಾಲೋಚನಾ ಸಭೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!