ಡಿ.19ರಂದು ಭಾರತೀಯ ಕಿಸಾನ್ ಸಂಘದಿಂದ ದೆಹಲಿ ಚಲೋ

ಹೊಸದಿಗಂತ ವರದಿ ಪೊನ್ನಂಪೇಟೆ:

ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿ. 19ರಂದು ಭಾರತೀಯ ಕಿಸಾನ್ ಸಂಘದಿಂದ ಆಯೋಜಿಸಿರುವ ‘ರೈತ ಘರ್ಜನ ದೆಹಲಿ ಚಲೋ’ ರ್‍ಯಾಲಿಯಲ್ಲಿ ಭಾರತೀಯ ಕಿಸಾನ್ ಸಂಘದ ಕೊಡಗು ಘಟಕದಿಂದಲೂ ರೈತರು ಭಾಗವಹಿಸಲಿದ್ದು, ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ಆಧರಿಸಿ ಲಾಭದಾಯಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟೀರ ಪ್ರವೀಣ್ ಭೀಮಯ್ಯ ತಿಳಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಭಾರತೀಯ ಕಿಸಾನ್ ಸಂಘವು 1970ರಲ್ಲಿ ಸ್ಥಾಪನೆಯಾಗಿದ್ದು, ದೇಶದ 480 ಜಿಲ್ಲೆಯಲ್ಲಿ ಸಂಘಟನೆಯನ್ನು ಹೊಂದಿದ್ದು, ಒಂದು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿದೆ. ವಿಶ್ವದಲ್ಲಿ ಅತಿ ದೊಡ್ಡ ರೈತ ಸಂಘಟನೆಯಾಗಿದ್ದು, ರೈತರ ಏಳಿಗೆಗೆ ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಿ ಸಲಹೆ ನೀಡುತ್ತಾ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು.

ಕೃಷಿ ಬೆಲೆ ಆಯೋಗ ರಚನೆಯಾಗಲಿ: ರೈತರು ಬೆಳೆಯುವ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೇಳುತ್ತಿಲ್ಲ, ಬದಲಾಗಿ ರೈತರ ಉತ್ಪನ್ನಗಳಿಗೆ ವೆಚ್ಚದ ಆಧಾರದಲ್ಲಿ ಲಾಭದಾಯಕ ಬೆಲೆಯನ್ನು ಸರಕಾರ ನೀಡಬೇಕೆಂದು ಒತ್ತಾಯಿಸುತ್ತದೆ ಎಂದು ಹೇಳಿದ ಅವರು, ಕೃಷಿ ಬೆಲೆ ಆಯೋಗ ರಚಿಸಬೇಕು, ರಸಗೊಬ್ಬರ ಮತ್ತು ರೈತರು ಖರೀದಿಸುವ ಯಂತ್ರೋಪಕರಣಗಳಿಗೆ ಕಂಪನಿಗಳ ಬದಲಾಗಿ ರೈತರಿಗೆ ನೇರವಾಗಿ ಸಹಾಯಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕೃಷಿ ತ್ಯಜಿಸುವ ಹಂತದಲ್ಲಿದ್ದಾರೆ: ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷ ಕೊಲ್ಲಿರ ಧರ್ಮಜ ಅವರು ಮಾತನಾಡಿ, ಕೊಡಗಿನಲ್ಲಿ ಪರಿಸರವನ್ನು ಉಳಿಸಿರುವ ರೈತರು ವನ್ಯಪ್ರಾಣಿ ಸಂಘರ್ಷದಿಂದ ಕೃಷಿಯನ್ನು ತ್ಯಜಿಸುವ ಹಂತದಲ್ಲಿದ್ದಾರೆ. ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರವನ್ನು ಒದಗಿಸಬೇಕು. ಸರ್ಕಾರ ಅನೇಕ ಯೋಜನೆಗಳನ್ನು ಮಾಡಿದ್ದು, ರೈತರಿಗೆ ಅದನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಂಭೀರವಾಗಿ ಪ್ರಯತ್ನಿಸಬೇಕು. ಅನೇಕ ರೈತ ಸಂಘಟನೆಗಳ ಹೋರಾಟದಿಂದ ಕಾಫಿ ಬೆಳೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಸರ್ಕಾರ ನೀಡಿದರೂ ಸಣ್ಣ ಬೆಳೆಗಾರ ಎಂಬ ವ್ಯಾಖ್ಯಾನದ ಗೊಂದಲದಲ್ಲಿರುವ ಜಿಲ್ಲಾಡಳಿತ ಹಾಗೂ ವಿದ್ಯುತ್ ಮಂಡಳಿ ರೈತರಿಗೆ ಈ ಸೌಲಭ್ಯವನ್ನು ನೀಡುವಲ್ಲಿ ಗೊಂದಲ ಸೃಷ್ಟಿಸಿವೆ. ಸಣ್ಣ ರೈತ ಎಂದು ಅನೇಕ ತರದ ದಾಖಲೆಗಳನ್ನು ರೈತರು ನೀಡಿ, ಸಣ್ಣ ರೈತ ಎಂದು ಸಾಬೀತುಪಡಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಕಿಡಿಕಾರಿದರು.

ಈ ಬಗ್ಗೆ ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಅವರು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದು 10 ಹೆಕ್ಟೇರ್ ಅಂದರೆ 25 ಎಕರೆ ಒಳಗೆ ಇರುವ ಬೆಳೆಗಾರರು ಸಣ್ಣ ಬೆಳೆಗಾರರು ಎಂದು ಕಾಫಿ ಮಂಡಳಿ ವ್ಯಾಖ್ಯಾನಿಸುತ್ತದೆ. ಹೀಗೆ ಅಧಿಕೃತವಾಗಿ ಪತ್ರ ನೀಡಿದರೂ ಸಹ ಸರ್ಕಾರದಿಂದ ಸಣ್ಣ ಬೆಳೆಗಾರರಿಗೆ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಯೋಜನೆಯನ್ನು ಒದಗಿಸುವಲ್ಲಿ ಗೊಂದಲ ಎಬ್ಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹೊಣೆ: ಕೊಡಗು ಜಿಲ್ಲೆಯ ಎಲ್ಲಾ ಜಾಗಗಳಿಗೆ ಕಂದಾಯ ನಿಗದಿ ಮಾಡಬೇಕು. ಈಗಾಗಲೇ ಕಂದಾಯ ಸಚಿವ ಅಶೋಕ್ ಅವರು ರಾಜ್ಯದ ಎಲ್ಲಾ ಕಂದಾಯ ಇಲಾಖೆಯ ಕೃಷಿ ಜಾಗಗಳಿಗೆ ಕಂದಾಯ ನಿಗದಿಪಡಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದರೂ ಸಹ ಕೊಡಗು ಜಿಲ್ಲೆಯಲ್ಲಿ ಇದು ಅನುಷ್ಠಾನ ಆಗಿಲ್ಲ. ಕಂದಾಯ ನಿಗದಿ ಗೊಂದಲಕ್ಕೆ ಜಿಲ್ಲಾಡಳಿತವೇ ಹೊಣೆಯಾಗಿದೆ. ಕಂದಾಯ ಇಲಾಖೆಯ ಕಡತ ವಿಲೇವಾರಿಗೆ ಜನ ಅಲೆಯುವಂತಾಗಿದೆ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕಾರ್ಯಕ್ರಮ ಆಗಬೇಕು ಎಂದ ಅವರು ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಭಾರತೀಯ ಕಿಸಾನ್ ಸಂಘ ಕೊಡಗು ಜಿಲ್ಲಾ ಘಟಕದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಮ್ಮಂಗಡ ರಾಜ ದೇವಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಳಮೇಂಗಡ ಪಿ. ರಮೇಶ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!