ಮುಂಬರುವ ವಿಧಾನಸಭಾ ಚುನಾವಣೆ ಸಿದ್ಧತೆ ಪರಿಶೀಲನೆಗೆ ಕರ್ನಾಟಕಕ್ಕೆ ಚುನಾವಣಾ ಆಯೋಗ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆಯಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ತಂಡ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ.

ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ, ಅರುಣ್ ಗೋಯೆಲ್ ಮತ್ತು ಜಿಲ್ಲಾಧಿಕಾರಿಗಳು ತಂಡದ ಭಾಗವಾಗಿರುತ್ತಾರೆ. ಆಯೋಗದ ತಂಡವು ಬೆಂಗಳೂರಿನಲ್ಲಿ ವಿಧಾನಸಭಾ ಚುನಾವಣೆಗೆ ನಡೆಸುತ್ತಿರುವ ಸಿದ್ಧತೆಗಳ ಕುರಿತು ಚುನಾವಣಾ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿಗಳ ಸಭೆ ನಡೆಸಲಿದೆ. ಜೊತೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುತ್ತಾರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಕುರಿತು ಅವರ ಸಲಹೆಗಳನ್ನು ಪಡೆಯುತ್ತಾರೆ.

ಮೊದಲ ದಿನದಂದು ತಂಡವು ಚುನಾವಣಾ ತಯಾರಿ ಕುರಿತು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ನಂತರ ರಾಜಕೀಯ ಪಕ್ಷಗಳ ಜತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ.
ಸಂಜೆ ಪ್ರಜಾಪ್ರಭುತ್ವದ ಸಮಗ್ರತೆ ಕುರಿತು ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ.

ಎರಡನೇ ದಿನ ಚುನಾವಣಾ ತಂಡವು ಎಲ್ಲಾ 34 ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ಕುಮಾರ್ ಮತ್ತು ಅವರ ತಂಡವು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಇಒ ಮತ್ತು ಬಿಬಿಎಂಪಿ ಆಯೋಜಿಸಿರುವ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.
ನಂತರ ಕುಮಾರ್ ಅವರು ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ವಿಶೇಷಚೇತನರು ಮತ್ತು ಇತರರೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!