ಪ್ರತೀ ಚುನಾವಣೆಯಲ್ಲೂ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಜೆಡಿಎಸ್‌ನಿಂದ ಮತರಾಜಕೀಯ: ಸತ್ಯಾನಂದ ಆರೋಪ

ಹೊಸದಿಗಂತ ವರದಿ,ಮಂಡ್ಯ :

ರಾಜ್ಯ ಹಾಗೂ ರಾಷ್ಟ್ರಕ್ಕೆ ಬಲಿಷ್ಠ ನಾಯಕತ್ವ ನೀಡಿದ್ದ ಮಂಡ್ಯ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ಮತ ಕೇಳುತ್ತಿದ್ದಾರೆಯೇ ಹೊರತು ಜಿಲ್ಲೆಯ ಅಭಿವೃದ್ಧಿಗಲ್ಲ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್. ಸತ್ಯಾನಂದ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಾರಿ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳನ್ನು ಗೆದ್ದು ಬೀಗಿದ ಜೆಡಿಎಸ್ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಶ್ರಮ ಪಡೆದ ಕಾಲಹರಣ ಮಾಡಿದ ಜಿಲ್ಲೆಯ ಜೆಡಿಎಸ್ ಶಾಸಕರು ಬೊಗಳೆ ಹೇಳಿಕೆಗಳು, ದುರಂಹಕಾರದ ನಡವಳಿಕೆಗಳ ಮೂಲಕಮತ ನೀಡಿದ ಮತದಾರರನ ನಂಬಿಕೆಗಳಿಗೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಸಾರ್ವಜನಿಕ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿದ್ದು, ಯಾವೊಬ್ಬ ಶಾಸಕನು ಅದನ್ನು ಪ್ರಶ್ನಿಸುವ ಬದಲು ಅದನ್ನು ಪೋಷಿಸುತ್ತಾ ಭ್ರಷ್ಟಾಚಾರದ ಪಾಲುದಾರರಾಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಕಡು ಭ್ರಷ್ಟಾಚಾರದಿಂದ ಬೇಸತ್ತಿರುವ ಜನತೆ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಉತ್ಸುಕತೆ ತೋರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾನವಧರ್ಮ ಹಾಗೂ ಅಭಿವೃದ್ಧಿಯನ್ನೇ ಮರೆತು ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರದ ನಡತೆಗೆ ರಾಜ್ಯದ ಜನ ಅಂತ್ಯ ಹಾಡಲಿದ್ದು, ಕಾಂಗ್ರೆಸ್ ಸರ್ಕಾರದ ಆಗಮನಕ್ಕೆ ಹಾತೊರೆಯುತ್ತಿದ್ದಾರೆ ಎಂದು ಹೇಳಿದರು.
ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಇದನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ನನಗೆ ಕೆಪಿಸಿಸಿ ವಕ್ತಾರರನ್ನಾಗಿ ನೇಮಿಸಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ತಾವು ರಾಜ್ಯಾದ್ಯಂತ ಪಕ್ಷ ಸಂಘಟನೆ ತೊಡಗುವುದರ ಜತೆಗೆ ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಪ್ರಶಾಂತಬಾಬು, ಟಿ.ಕೆ. ರಾಮಲಿಂಗಯ್ಯ, ಉಮ್ಮಡಹಳ್ಳಿ ನಾಗೇಶ್, ಲಿಂಗೇಗೌಡ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!