ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇದರ ನಡುವೆ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ.
ಈ ಮಧ್ಯೆ ಚುನಾವಣೆ ಪ್ರಕ್ರಿಯೆಗಳು ಶುರುವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿ ಆದೇಶಿಸಿದೆ.
ಆರೋಗ್ಯ ಇಲಾಖೆಯಿಂದ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ್ದು, ಚುನಾವಣಾ ಪ್ರಚಾರದ ಅಬ್ಬರದಲ್ಲಿ ಮೈ ಮರೆಯದಂತೆ ಎಚ್ಚರಿಕೆ ನೀಡಿದೆ.
ಕೋವಿಡ್ ಹರಡದಂತೆ ಎಚ್ಚರ ವಹಿಸುವುದು ಮುಖ್ಯವಾಗಿದ್ದು, ಎಲೆಕ್ಷನ್ ಪ್ರಚಾರದ ವೇಳೆ ಆಯೋಜಿಸುವ ಸಭೆಗಳು, ಮೆರವಣಿಗೆ, ರೋಡ್ ಶೋಗೆಲ್ಲ ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಕೋವಿಡ್ ಹರಡುವಿಕೆ ಪ್ರಮಾಣ ಹೆಚ್ಚಾದಲ್ಲಿ ಆಯಾ ರಾಜಕೀಯ ಪಕ್ಷವೇ ಹೊಣೆ ಹೊರಬೇಕು ಎಂದಿದೆ.
ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರು ಹಾಗೂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಮತದಾನ ಮಾಡಲು ಸಮಯ ಮೀಸಲಿಡಬೇಕು. ಜತೆಗೆ ಅಂಚೆ ಮತದಾನದ ಆಯ್ಕೆಯ ಅವಕಾಶವನ್ನು ಕಲ್ಪಿಸಬಹುದಾಗಿದೆ. ಇನ್ನು ಮತದಾನ ನಡೆಯುವ ದಿನ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ವಿತರಿಸಬೇಕು. ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲ ಮತಗಟ್ಟೆಗಳ ಮುಂದೆ ಕೋವಿಡ್ ಜಾಗೃತಿ ಬಗ್ಗೆ ಪೋಸ್ಟರ್ ಅಳವಡಿಸಬೇಕು.
ಮತದಾನದ ಬಳಿಕ ಮತ ಎಣಿಕೆ ಪ್ರಕ್ರಿಯೆಯಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತ ಎಣಿಕೆಗೆ ಗರಿಷ್ಠ 15 ಟೇಬಲ್‌ಗಳನ್ನೇ ಹಾಕಬೇಕು. ಜತೆಗೆ ಮತ ಎಣಿಕೆ ಕೇಂದ್ರದ ಹೊರಗೆ ಸಾರ್ವಜನಿಕರು ಗುಂಪು ಗುಂಪಾಗಿ ನಿಲ್ಲುವಂತಿಲ್ಲ ಎಂದು ಸೂಚಿಸಿದೆ.