Wednesday, March 29, 2023

Latest Posts

ವಿಜಯಪುರ ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕು: ಶಾಸಕ ಯಶವಂತರಾಯಗೌಡ ಪಾಟೀಲ

ದಿಗಂತ ವರದಿ ವಿಜಯಪುರ:

ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಕೂಡಲೇ ಚುನಾವಣೆ ಕೈಗೊಳ್ಳಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ನಡೆದು, ಹಲವು ದಿನ ಕಳೆದರು ಇನ್ನು ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿಲ್ಲ. ಇನ್ನಾದರು ಚುನಾವಣೆ ನಡೆಸಬೇಕು. ಯಾವ ಸಮಯದಲ್ಲಿ ಏನಾಗಬೇಕು ಅದು ಆದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲೆಯಲ್ಲಿ ತೊಗರಿ ಬೆಳೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರ ಇಲ್ಲಿಯವರೆಗೆ ಪರಿಹಾರ ಒದಗಿಸಿಲ್ಲ.
ಇಂಥವುಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದರು.

ಈ ಜಿಲ್ಲೆಗೆ ನಿಸರ್ಗದ ಕೊಡುಗೆ ಇದೆ. ಸಿದ್ದೇಶ್ವರ ಶ್ರೀಗಳ ವಿಚಾರಗಳನ್ನು ಅಳವಡಿಸಿಕೊಂಡು ಅಭಿವೃದ್ಧಿಗೆ ಮುಂದಾಗಬೇಕಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಇಂಡಿ ಜನರಿಗೆ ನೀರು ಕೊಟ್ಟರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಿತ್ತು, ಆ ನಿಟ್ಟಿನಲ್ಲಿ ಜಲಧಾರೆ ಎನ್ನುವ ಯೋಜನೆಯಿಂದ ಇಂಡಿ ಮತ್ತು ಮಂಡ್ಯದಲ್ಲಿ ಶಾಶ್ವತ ಪರಿಹಾರ ಒದಗಿಸಬೇಕಾಗಿತ್ತು. ಇಲ್ಲಿಯವರೆಗೆ ಕಲ್ಪಿಸದಿರುವುದು ದುರಂತ. ಇದು ಬಹಳ ಮಂದಗತಿಯಲ್ಲಿ ನಡೆದಿದೆ ಎಂದು ದೂರಿದರು.

ಬಿಜೆಪಿ ಸರ್ಕಾರ ಎಲ್ಲ ವಿವಿಧದಲ್ಲಿ ವಿಫಲವಾಗಿದೆ. ಅಲ್ಲದೆ ಈ ಸರ್ಕಾರದ ವಿರುದ್ಧ ಜನ ವಿರೋಧಿ ಅಲೆ ಇರುವುದು ತಿಳಿದು ಬರುತ್ತಿದೆ ಎಂದರು.

ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮುಂದಾಳತ್ವದಲ್ಲಿ
ಫೆ. 11 ರಂದು ಇಂಡಿಯಲ್ಲಿ
ಸಮಾವೇಶ ಹಮ್ಮಿಕೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅಂದು ಬಿಜೆಪಿ ಸರ್ಕಾರದ ವೈಫಲ್ಯದ ಕುರಿತು ಮಾತನಾಡಲಿದ್ದಾರೆ ಎಂದರು.

ಇಂಡಿ ಜಿಲ್ಲಾ ಕೇಂದ್ರ ಮಾಡುವುದು ನನ್ನ ಪ್ರಮುಖ ಆದ್ಯತೆಯಾಗಿದ್ದು, ಹಾಗೇನಾದರೂ ಮಾಡದಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!