Saturday, September 23, 2023

Latest Posts

ಚುನಾವಣಾ ರಾಜ್ಯಗಳಲ್ಲಿ ಜೋರಾಗಿದೆ ಪಕ್ಷಾಂತರ ಪರ್ವ, ಉ.ಪ್ರದಲ್ಲಿ ಸಚಿವರೇ ಪಕ್ಷ ಬದಲಿಸಿದರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಕಳೆದ ವಾರಷ್ಟೇ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ ಮಾಡಿದೆ. ಇದೀಗ ಪಂಜಾಬ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣಾ ಹವಾ ಇದ್ದು, ಪಕ್ಷಾಂತರ ಪರ್ವ ಕೂಡ ಜೋರಾಗಿದೆ.

ಪಂಜಾಬ್‌ನಲ್ಲಿ ಎರಡು ಅವಧಿಗೆ ಶಾಸಕರಾಗಿದ್ದ ಕಾಂಗ್ರೆಸ್‌ನ ಅರವಿಂದ್ ಖನ್ನಾ ಮತ್ತು ರಾಜ್ಯದ ಹಲವಾರು ರಾಜಕಾರಣಿಗಳು ಮಂಗಳವಾರ ದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಹರ್ದೀಪ್ ಸಿಂಗ್ ಪುರಿ, ಪಂಜಾಬ್ ಉಸ್ತುವಾರಿ ದುಷ್ಯಂತ್ ಗೌತಮ್, ಮಂಜಿಂದರ್ ಸಿರ್ಸಾ ಅವರ ಸಮ್ಮುಖದಲ್ಲಿ ಎಸ್‌ಜಿಪಿಸಿ ಮಾಜಿ ಅಧ್ಯಕ್ಷ ಗುರುಚರಣ್ ಸಿಂಗ್ ತೋಹ್ರಾ ಅವರ ಮೊಮ್ಮಗ ಕನ್ವರ್ವೀರ್ ಸಿಂಗ್ ತೋಹ್ರಾ, ಅಕಾಲಿದಳದಲ್ಲಿದ್ದ ಗುರುದೀಪ್ ಸಿಂಗ್ ಗೋಶಾ ಮತ್ತು ಧರಂವೀರ್ ಸರೀನ್ ಬಿಜೆಪಿಗೆ ಸೇರ್ಪಡೆಗೊಂಡರು.

ಫೆಬ್ರವರಿ 14 ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಉಸ್ತುವಾರಿಯಾಗಿರುವ ಶೇಖಾವತ್ ಅವರನ್ನು ಸ್ವಾಗತಿಸಿ, ಪಕ್ಷದ ಯಶಸ್ಸಿನ ಮೂಲಕ ಈ ಪ್ರದೇಶದ ಚುನಾವಣಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಪ್ರತಿಪಾದಿಸಿದ್ದಾರೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ನೇತೃತ್ವದ ಅಕಾಲಿ ಬಣದೊಂದಿಗೆ ಚುನಾವಣೆ ಎದುರಿಸಲು ಕೈಜೋಡಿಸಿದೆ.

ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ

 

ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಇಂದು ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಯೋಗಿ ಸರಕಾರದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಕಾರ್ಮಿಕ ಸಚಿವರಾಗಿದ್ದರು. ಮೌರ್ಯ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೂಡಲೇ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಜೊತೆಗಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!