ದೇಶದಲ್ಲಿ 57 ಆನೆಗಳನ್ನು ಬಲಿಪಡೆದ ವಿದ್ಯುತ್‌ ಶಾಕ್: ಅರಣ್ಯ ಸಚಿವಾಲಯ ಮಾಹಿತಿಯಲ್ಲಿದೆ ಆಘಾತಕಾರಿ ವಿಚಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2021-22 ನೇ ಸಾಲಿನಲ್ಲಿ ಭಾರತವು ಅಸ್ವಾಭಾವಿಕ ಕಾರಣಗಳಿಂದ 82 ಆನೆಗಳನ್ನು ಕಳೆದುಕೊಂಡಿತು. ಆಘಾತಕಾರಿ ವಿಚಾರವೆಂದರೆ ಅವುಗಳಲ್ಲಿ 57 ಆನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪಿವೆ.
ಮತ್ತೊಂದು ವಿಚಾರವೆಂದರೆ, ಕಳೆದ ಐದು ವರ್ಷಗಳಲ್ಲಿ 348 ಆನೆಗಳು ಸಾವನ್ನಪ್ಪಲು ವಿದ್ಯುತ್‌ ಶಾಕ್‌ ಕಾರಣಗಿದೆ.  ಆದ್ದರಿಂದ ಭಾರತದಲ್ಲಿ ಆನೆಗಳಿಗೆ ವಿದ್ಯುದಾಘಾತವು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.
ಡಿಸೆಂಬರ್ 19 ರಂದು ಲೋಕಸಭೆಯಲ್ಲಿ ಅಧೀರ್ ರಂಜನ್ ಚೌಧರಿ ಎತ್ತಿದ ಪ್ರಶ್ನೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಳ ಸಚಿವಾಲಯ ನೀಡಿದ ಮಾಹಿತಿಯಲ್ಲಿ ಹಲವಾರು ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಈ ವರ್ಷವೂ ದೇಶದಲ್ಲಿ ಆನೆಗಳ ಸಾವಿನ ಸರಪಳಿ ಮುಂದುವರೆದಿದೆ. ಆನೆ ಮತ್ತು ಮಾನವ ಸಂಘರ್ಷದಲ್ಲಿ ಆನೆಗಳು ಬೆಳದ ಫಸಲನ್ನು ನಾಶಪಡಿಸಿದರೆ, ಮಾನವ ವಿದ್ಯುತ್‌ ಶಾಕ್‌ ನೀಡಿ ಅವುಗಳ ಸಾವಿಗೆ ಕಾರಣವಾಗುತ್ತಿದ್ದಾನೆ.
ವಿದ್ಯುದಾಘಾತದಿಂದಾಗಿ ಒಡಿಶಾ ಅತಿ ಹೆಚ್ಚು ಅಂದರೆ 13 ಆನೆಗಳನ್ನು ಕಳೆದುಕೊಂಡಿದೆ, ನಂತರದ ಸ್ಥಾನದಲ್ಲಿ ಕರ್ನಾಟಕ ಏಳು, ಕೇರಳ ಆರು, ತಮಿಳುನಾಡು ಐದು, ಜಾರ್ಖಂಡ್ ಮತ್ತು ಛತ್ತೀಸ್‌ಗಢ ತಲಾ ನಾಲ್ಕು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ತಲಾ ಎರಡು ಆನೆಗಳನ್ನು ಕಳೆದುಕೊಂಡಿವೆ. ಅಸ್ಸಾಂನಲ್ಲಿ ರೈಲು ಅಪಘಾತದಿಂದ ಎಂಟು ಆನೆಗಳು ಸಾವನ್ನಪ್ಪಿದ್ದರೆ, ಆ ರಾಜ್ಯದಲ್ಲಿ ಆರು ಆನೆಗಳು ವಿಷ ಸೇವಿಸಿ ಸಾವನ್ನಪ್ಪಿವೆ. ಈ ವರ್ಷ ಅಸ್ಸಾಂನಲ್ಲಿ ಯಾವುದೇ ಬೇಟೆ ಪ್ರಕರಣಗಳು ವರದಿಯಾಗಿಲ್ಲ.
ದೇಶದಲ್ಲಿ ಬೇಟೆಯಾಡಿದ ನಾಲ್ಕು ಆನೆಗಳ ಪೈಕಿ ಒಡಿಶಾದಲ್ಲಿ ಮೂರು ಮತ್ತು ತಮಿಳುನಾಡಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಆನೆಗಳಿಗೆ ವಿಷಪ್ರಾಶನದ ಎಲ್ಲಾ ಆರು ಪ್ರಕರಣಗಳು ಈ ವರ್ಷ ಅಸ್ಸಾಂನಿಂದ ವರದಿಯಾಗಿವೆ.
ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ಕರ್ನಾಟಕದಲ್ಲಿ 8 ಆನೆಗಳನ್ನು ಅಸ್ವಾಭಾವಿಕ ಕಾರಣಗಳಿಂದ ಕಳೆದುಕೊಂಡಿದ್ದು, ಏಳು ಆನೆಗಳು ವಿದ್ಯುತ್ ಆಘಾತದಿಂದ ಸಾವನ್ನಪದಪಿವೆ. ರೈಲು ಅಪಘಾತದಲ್ಲಿ ಒಂದು ಆನೆ ಸಾವನ್ನಪ್ಪಿದೆ. 2020-21ರಲ್ಲಿ ವಿದ್ಯುದಾಘಾತದಿಂದ 9 ಆನೆಗಳು, 2019-20ರಲ್ಲಿ ಎಂಟು ಆನೆಗಳು 2018-19ರಲ್ಲಿ ಒಂಬತ್ತು ಮತ್ತು 2017-18ರಲ್ಲಿ 10 ಆನೆಗಳನ್ನು ರಾಜ್ಯವು ಕಳೆದುಕೊಂಡಿವೆ.
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಒಂದೇ ಒಂದು ಆನೆ ಬೇಟೆ ಪ್ರಕರಣ ವರದಿಯಾಗಿಲ್ಲ ಎಂದು ಸಚಿವಾಲಯ ನೀಡಿರುವ ಉತ್ತರ ತಿಳಿಸಿದೆ. ರಾಜ್ಯದಲ್ಲಿ 2017-18ರಲ್ಲಿ ಆನೆಗಳಿಗೆ ವಿಷಪ್ರಾಶನದ ಕೊನೆಯ ಪ್ರಕರಣ ವರದಿಯಾಗಿದೆ.
ರಾಷ್ಟ್ರಮಟ್ಟದಲ್ಲಿಯೂ ಅಸ್ವಾಭಾವಿಕ ಕಾರಣಗಳಿಂದ ಆನೆಗಳ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ, ಭಾರತವು 99 ಆನೆಗಳನ್ನು ಕಳೆದುಕೊಂಡಿತ್ತು. 2020 ರಲ್ಲಿ ಅದೇ ಸಂಖ್ಯೆ ಮುಂದುವರೆದಿತ್ತು. 2018-19ರಲ್ಲಿ ಮಾನವ ಕಾರಣಗಳಿಂದಾಗಿ 115 ಆನೆಗಳು ಮತ್ತು 2017-18ರಲ್ಲಿ 105 ಆನೆಗಳು ಸಾವನ್ನಪ್ಪಿವೆ ಎಂದು ದಾಖಲೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!