ಹೊಸದಿಗಂತ ವರದಿ ಮಡಿಕೇರಿ:
ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಪಾಲಿಬೆಟ್ಟ ಸಮೀಪದ ಮಸ್ಕಲ್ ತೋಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಬಾಬಿ (57) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರಿಗೆ ಅಮ್ಮತ್ತಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಬಿ ಗುರುವಾರ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಿಂದ ಸಾಂತ್ವನ:
ಬಾಬಿ ಅವರ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವಂತೆ ಹಾಗೂ ಕಾಡಾನೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೆ ಮೈಸೂರಿನ ಆಸ್ಪತ್ರೆಗೆ ತೆರಳುವಂತೆ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಅವರಿಗೆ ನಿರ್ದೇಶನ ನೀಡಿರುವ ಪೊನ್ನಣ್ಣ, ನೊಂದ ಕುಟುಂಬಕ್ಕೆ ಅಗತ್ಯ ಸಹಕಾರ ನೀಡುವಂತೆ ಕೋರಿದ್ದಾರೆ. ಅದರಂತೆ ಸಂಕೇತ್ ಅವರು ಮೈಸೂರಿನ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.