ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನೆಟ್ ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ‘ಎಲಿಫೆಂಟ್ ವಿಸ್ಪರರ್ಸ್ʼ ಎಂಬ ಸಾಕ್ಷ್ಯಚಿತ್ರವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಹೆತ್ತ ಮಕ್ಕಳಿಲ್ಲದ ವೃದ್ಧ ದಂಪತಿಗಳಿಬ್ಬರು ಕಾಡಾನೆ ಮರಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಸಾಕಿ ಅವುಗಳನ್ನು ಬೆಳೆಸುವುದೇ ಈ ಸಾಕ್ಷ್ಯಚಿತ್ರದ ಕಥಾ ಹಂದರ.
ಮದುಮಲೈ ಕಾಡಿನಲ್ಲಿರುವ ಏಷ್ಯಾದ ಆನೆಗಳ ಅತಿದೊಡ್ಡ ಆನೆಕ್ಯಾಂಪ್ ನಲ್ಲಿ ಈ ಸಾಕ್ಷ್ಯಚಿತ್ರ ತೆರೆದುಕೊಳ್ಳುತ್ತದೆ. ಬೊಮ್ಮನ್ ಮತ್ತು ಬೆಳ್ಳಿ ಎಂಬಿಬ್ಬರು ವೃದ್ಧ ದಂಪತಿಗಳು ಕಾಡನೆಗಳ ಹಿಂಡಿನಿಂದ ಬೇರ್ಪಟ್ಟ ಅನಾಥ ಮರಿಯಾನೆ ರಘುವನ್ನು ಅವರು ಹೇಗೆ ಬೆಳೆಸಿ ದೊಡ್ಡವನನ್ನಾಗಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಕಥೆಯ ಮೂಲ ವಸ್ತುವೇ ಇದು. ಬೊಮ್ಮನ ಮುಂಜಾನೆ ಶುರುವಾಗುವುದೇ ರಘುವಿನ ಪ್ರೀತಿಯಿಂದ. ಬೆಳಿಗ್ಗೆ ಎದ್ದು ರಘುವನ್ನು ನದಿಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಆತನೊಂದಿಗೆ ಪ್ರೀತಿಯಿಂದ ಆಟವಾಡಿ, ಅವನಿಗೆ ಹೊಟ್ಟೆಗೆ ಹಾಕುವಾಗಲೆಲ್ಲ ಬೊಮ್ಮನ್ ಮರಿಯಾನೆ ರಘುವಿನ ಮೇಲೆ ತೋರಿಸುವ ಮಮತೆ, ಪ್ರೀತಿ ಎಂಥ ಕಲ್ಲೆದೆಯನ್ನೂ ಕರಗಿಸುತ್ತದೆ.
ರಘು ಮೂಲಕ ನಮಗೆ ಬೊಮ್ಮನ್ ಮತ್ತು ಬೆಳ್ಳಿಯ ಜೀವನದ ಒಂದು ನೋಟವನ್ನು ನೀಡಲಾಗಿದೆ. ರಘು ಮತ್ತು ಕಾಡು ಅವರ ಪ್ರಪಂಚ, ಮತ್ತು ಅದಕ್ಕಾಗಿ ಅವರು ಬದುಕುವ ರೀತಿ, ಪ್ರತಿ ವಿವರವನ್ನು ಕಟ್ಟಿಕೊಡಲಾಗಿದೆ. ಬೆಳ್ಳಿ ತನ್ನ ಮಗಳನ್ನು ಕಳೆದುಕೊಂಡ ವಿಧವೆ. ತನ್ನ ನೋವಿನ ದಿನಗಳಲ್ಲಿ ರಘು ತನಗೆ ಹೇಗೆ ಸಹಾಯ ಮಾಡಿದನೆಂದು ಅವಳು ನೆನಪಿಸಿಕೊಳ್ಳುತ್ತಾಳೆ. ಅವರಿಬ್ಬರಿಗೂ ರಘು ನೋವ ಮರೆವ ಸಂಗಾತಿಯಂತೆ.
ಕಾಡಾನೆ ಮರಿಯನ್ನು ಸಾಕುವುದು ಸುಲಭವಲ್ಲ. ಅವುಗಳಿಗೆ ತಾಯಿಯಷ್ಟೇ ಪ್ರೀತಿ ಅಕ್ಕರೆ ಕಾಳಜಿ ತೋರಿಸಿದರೆ ಮಾತ್ರ ಅವು ಬದುಕುಳಿಯುತ್ತವೆ. ಹೀಗೆ ಕಾಡಿನಲ್ಲಿ ಸಿಕ್ಕ ಅನೇಕ ಅನಾಥ ಮರಿಯಾನೆಗಳು ಮಾನವನ ಪ್ರೀತಿಯಲ್ಲಿ ಬದುಕುಳಿಯುವುದೇ ಅಪರೂಪ. ಬೊಮ್ಮನ್ ಮತ್ತು ಬೆಳ್ಳಿ ಅಂತಹ ಮರಿಯಾನೆಗಳನ್ನು ಸಾಕಿ ಸಲಹಿದವರು. ಹಾಗಾಗಿ ಅವರಿಗೆ ರಘುವಿನೊಟ್ಟಿಗೆ ಅಮ್ಮುಕುಟ್ಟಿಯೆಂಬ ಇನ್ನೊಂದು ಪುಟಾಣಿ ಮರಿಯಾನೆಯೂ ಜತೆಯಾಗುತ್ತದೆ. ಇವರಿಬ್ಬರನ್ನೂ ಅಷ್ಟೇ ಪ್ರೀತಿಯಿಂದ ಸಾಕುತ್ತಾರೆ ಬೊಮ್ಮನ್ ಮತ್ತು ಬೆಳ್ಳಿ. ಆದರೆ ರಘು ತುಸು ದೊಡ್ಡವನಾದ್ದರಿಂದ ಆತನನ್ನು ಬೇರೆಡೆಗೆ ಕೊಂಡೊಯ್ಯುವಾಗ ಈ ವೃದ್ಧ ದಂಪತಿಗಳ ತಳಮಳ ಒಂದು ಕ್ಷಣಕ್ಕೆ ಕಣ್ಣಂಚನ್ನು ಒದ್ದೆಯಾಗಿಸುತ್ತದೆ. ಏಷ್ಯಾದಲ್ಲಿಯೇ ಎರಡೆರಡು ಅನಾಥ ಮರಿಯಾನೆಗಳನ್ನು ಸಾಕಿ ಸಲಹಿದವರಲ್ಲಿ ಬೊಮ್ಮನ್ ದಂಪತಿಗಳು ಮೊದಲಿಗರು.
ಹೀಗೆ ನಿಸರ್ಗದವೆಂದರೆ ಬೇಕಬಿಟ್ಟಿಯಾಗಿ ಆಳುವ ವಸ್ತುವಲ್ಲ, ಬದಲಾಗಿ ಶರಣಾಗಿ ಜತೆಬಾಳ್ವೆ ನಡೆಸಬೇಕಾದ ಸಂಗಾತಿ ಎಂಬುದನ್ನು ಈ ಸಾಕ್ಷ್ಯಚಿತ್ರ ಅಚ್ಚುಕಟ್ಟಾಗಿ ವಿವರಿಸುತ್ತದೆ. ರಘುವಿನ ಈ ಕಥೆ ನೋಡಬೇಕೆಂದರೆ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. ಕಣ್ತುಂಬಿಸಿಕೊಳ್ಳಿ.