ಟ್ರೂಡೊ ಸರ್ಕಾರಕ್ಕೆ ಮುಜುಗರ: ನಿಜ್ಜರ್ ಹತ್ಯೆಯಲ್ಲಿ ಮೋದಿ-ಅಜಿತ್ ದೋವಲ್ ಕೈವಾಡ ಆರೋಪ ವರದಿ ನಿರಾಕರಿಸಿದ ಕೆನಡಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಕೈವಾಡ ಇದೆ ಎಂಬ ವರದಿಯನ್ನು ಕೆನಡಾ ಸರ್ಕಾರ ನಿರಾಕರಿಸಿದೆ.

ಇತ್ತೀಚೆಗೆ ಪ್ರಕಟಗೊಂಡ ವಿವಾದಾತ್ಮಕ ಮಾಧ್ಯಮ ವರದಿಯ ಬಗ್ಗೆ ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರ ಸ್ಪಷ್ಟೀಕರಣ ನೀಡಿದೆ. ವರದಿ ಕುರಿತು ಪ್ರಿವಿ ಕೌನ್ಸಿಲ್‌ನ ಡೆಪ್ಯುಟಿ ಕ್ಲರ್ಕ್ ಮತ್ತು ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ. ಡ್ರೂಯಿನ್ ಈ ಹೇಳಿಕೆ ನೀಡಿದ್ದು, ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೈವಾಡ ಇರುವ ಬಗ್ಗೆ ಉಲ್ಲೇಖಿಸಲಾಗಿದ್ದು, ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಕೆನಡಾ ಸರ್ಕಾರವು ಈ ಹೇಳಿಕೆಯನ್ನು ನೀಡಿಲ್ಲ, ಅಥವಾ ಕೆನಡಾದಲ್ಲಿ ನಡೆಯುವ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್‌ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ವರದಿ ಕೇವಲ ಊಹಾಪೋಹವನ್ನು ಆಧರಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

ಈ ಮೂಲಕ ಭಾರತದ ಮೇಲೆ ಆಗಾಗ ಸುಳ್ಳು ಆರೋಪ ಹೊರಿಸುತ್ತಲೇ ಬಂದಿರುವ ಜಸ್ಟಿನ್ ಟ್ರೂಡೊ ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರವಾಗಿದೆ. ಆರೋಪ ಕುರಿತು ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ರೂಡೊ ಸರ್ಕಾರ ಈ ಹೇಳಿಕೆಯನ್ನು ನೀಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!