ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು 2025 ರ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ನಡೆಯಲಿದೆ ಎಂದು ಸೋಮವಾರ ಘೋಷಿಸಿದ್ದಾರೆ.
ಈ ವರ್ಷದ ಆಗಸ್ಟ್‌ನಲ್ಲಿ ಹಿಂಸಾತ್ಮಕ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಹೊರಹಾಕಿದ ನಂತರ ಜಾರಿಗೆ ಬಂದ ಉಸ್ತುವಾರಿ ಸರ್ಕಾರದ ಮುಖ್ಯ ಸಲಹೆಗಾರನಾಗಿರುವ ಯೂನಸ್ ಅವರ ಮೇಲೆ ಚುನಾವಣಾ ದಿನಾಂಕಗಳನ್ನು ನಿಗದಿಪಡಿಸುವಂತೆ ಒತ್ತಡ ಹೆಚ್ಚುತ್ತಿದ್ದರಿಂದ ಅವರು ಚುನಾವಣೆಯ ದಿನಾಂಕಗಳನ್ನು 2025 ರ ಅಂತ್ಯದ ವೇಳೆಗೆ ಅಥವಾ 2026 ರ ಮೊದಲಾರ್ಧದಲ್ಲಿ ನಿಗದಿಪಡಿಸಬಹುದು ತಿಳಿಸಿದರು.
ಅದರೊಂದಿಗೆ ಯೂನಸ್ ಅವರು ಚುನಾವಣೆ ನಡೆಸುವ ಮುನ್ನ ಹಲವು ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದ್ದು, ದೋಷರಹಿತ ಮತದಾರರ ಪಟ್ಟಿಯನ್ನು ಹೊಂದಿರುವಂತಹ ಕನಿಷ್ಠ ಸುಧಾರಣೆಗಳೊಂದಿಗೆ ಹಿಂದಿನ ದಿನಾಂಕದಂದು ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಒಪ್ಪಿಕೊಂಡರೆ, ನವೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬಹುದು. ಯಾಕಂದರೆ ಚುನಾವಣಾ ಸುಧಾರಣೆಗಳ ಸಂಪೂರ್ಣ ಪಟ್ಟಿಯನ್ನು ಸೇರಿಸುವುದರಿಂದ ಕೆಲವು ತಿಂಗಳುಗಳವರೆಗೆ ಚುನಾವಣೆ ವಿಳಂಬವಾಗುತ್ತದೆ ಎಂದು ಅವರು ಹೇಳಿದರು.
ಅಗತ್ಯವಿರುವ ಸುಧಾರಣೆಗಳಲ್ಲಿ ಪ್ರಮುಖವಾದದ್ದು ನವೀಕರಿಸಿದ ಮತದಾರರ ಪಟ್ಟಿ, ವರ್ಷಗಳ ಪ್ರಕ್ಷುಬ್ಧ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ನಂತರ “ಸಂಕೀರ್ಣ” ಸವಾಲು, ವೇಗವಾಗಿ ಬೆಳೆಯುತ್ತಿರುವ ಯುವ ಜನಸಂಖ್ಯೆಯಲ್ಲಿ ಮೊದಲ ಬಾರಿಗೆ ಮತದಾರರನ್ನು ನೋಂದಾಯಿಸುವುದರ ಜೊತೆಗೆ ಪಟ್ಟಿಗಳಿಂದ ಸುಳ್ಳು ಹೆಸರುಗಳನ್ನು ತೆಗೆದುಹಾಕುವ ಅಗತ್ಯವಿದ್ದು, ಮತದಾನದಲ್ಲಿ “ಶೇ 100 ರಷ್ಟು ಮತದಾನವನ್ನು ಖಾತ್ರಿಪಡಿಸುವ” ಕನಸು ಕಂಡಿದ್ದಾರೆ ಎಂದು ಹೇಳಿದರು.
ಇದನ್ನು ಸಾಧಿಸಲು ಸಾಧ್ಯವಾದರೆ, ಯಾವುದೇ ಸರ್ಕಾರವು ಮತ್ತೆ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಧೈರ್ಯ ಮಾಡುವುದಿಲ್ಲ ಎಂದು ಅವರು ಹೇಳಿದರು.