ಸದೃಢ ಶಿಕ್ಷಣ ಸಂಸ್ಥೆಯಿಂದ ನಾಗರಿಕರ ಸಬಲೀಕರಣ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಹೊಸದಿಗಂತ ವರದಿ ತುಮಕೂರು:
ತಿಪಟೂರುನಾಗರಿಕರು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು. ಹೀಗಾದಾಗ, ಶಿಕ್ಷಣ ಸಂಸ್ಥೆಗಳು ಗುಣಮಟ್ಟದಲ್ಲಿ ಮೇಲ್ದರ್ಜೆಗೇರುವ ಜೊತೆಗೆ ನಾಗರಿಕರ ಸಬಲೀಕರಣವೂ ಸಾಧ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ತಿಪಟೂರು ಸ್ನಾತಕೋತ್ತರ ಕೇಂದ್ರ “ಕಲ್ಪಸಿರಿ”ಯ ನಿರ್ಮಾಣಕ್ಕೆ, ತಿಪಟೂರು ಸಮೀಪದ ರಂಗಾಪುರದಲ್ಲಿ ಸೋಮವಾರ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇಪ್ಪತ್ತೊಂದನೇ ಶತಮಾನವು ಜ್ಞಾನಾಧಾರಿತ ಸಮಾಜವಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಸುಸ್ಥಿರವಾಗಿರಬೇಕೆಂದರೆ ಗುಣಮಟ್ಟ ಮುಖ್ಯ. ಇಂತಹ ಕೇಂದ್ರಗಳು ಸ್ಥಳೀಯವಾಗಿ ಪ್ರತಿಭೆಯನ್ನು ಉತ್ತೇಜಿಸುವ ಜೊತೆಗೆ ಇಡೀ ದೇಶದೆಲ್ಲೆಡೆಯ ಪ್ರತಿಭೆಗಳನ್ನು ಇಲ್ಲಿಗೆ ಸೆಳೆಯುವ ರೀತಿಯಲ್ಲಿ ಬೆಳೆಯಬೇಕು. ಇದು ಸಾಧ್ಯವಾದಾಗ, ವೈವಿಧ್ಯತೆಯನ್ನು ಉಳಿಸಿಕೊಂಡು ನಮ್ಮತನದ ಛಾಪನ್ನು ಒತ್ತಿದಂತಾಗುತ್ತದೆ ಎಂದು ಸಚಿವರು ವಿವರಿಸಿದರು.

ಯಾವ ಜಾಗದಲ್ಲಿ ಗುಣಮಟ್ಟದ ಶಿಕ್ಷಣ ಇರುತ್ತದೋ ಅದು ಸಮೃದ್ಧತೆಯ ತಾಣವಾಗುತ್ತದೆ. ಇಲ್ಲಿ 16 ಎಕರೆ ಕ್ಯಾಂಪಸ್ ತಲೆಯೆತ್ತಲಿದ್ದು, ಎಂ.ಕಾಂ, ಎಂಸಿಎ ಕೋರ್ಸ್ ಗಳು ಇರಲಿವೆ. ಜಿಲ್ಲೆಯ ಬಿದರೆಕಟ್ಟೆಯಲ್ಲಿ 44 ಕೋಟಿ ವೆಚ್ಚದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಕಾರ್ಯ ನಡೆದಿದೆ. ಸಿರಾದಲ್ಲಿ ಪಿ.ಜಿ. ಕೇಂದ್ರ ಕಾರ್ಯಾಚರಿಸುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ವಿ.ವಿ.ಯಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ, ಒಟ್ಟು 70 ಎಕರೆ ವಿಸ್ತೀರ್ಣದಲ್ಲಿರುವ ತುಮಕೂರು ವಿ.ವಿ.ಯು ಈಗ ನ್ಯಾಕ್ ಬಿ+ ಶ್ರೇಣಿಯಲ್ಲಿದ್ದು, ಎ+ ಶ್ರೇಣಿಗೆ ಏರಬೇಕು. ಅದೇ ರೀತಿ ಎನ್.ಐ.ಆರ್.ಎಫ್. ಶ್ರೇಯಾಂಕದಲ್ಲಿ ಈಗ 150ರಿಂದ 200ರ ಒಳಗಿದ್ದು, ಇದು ಇನ್ನಷ್ಟು ಮೇಲಕ್ಕೆ ಬರಬೇಕು. ಒಟ್ಟಾರೆ ತುಮಕೂರು ವಿ.ವಿ. ದೇಶದ ಎಲ್ಲಾ ಭಾಗದವರೂ ಓದಲು ಬಯಸುವಂತಹ ಶೈಕ್ಷಣಿಕ ತಾಣವಾಗಬೇಕು ಎಂದು ಆಶಿಸಿದರು.

ಸದ್ಯ ತಾಂತ್ರಿಕತೆಯು ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುತ್ತಿದೆ. ಈಗ ರಾಜ್ಯದ ಯಾವುದೇ ಗ್ರಾಮದ ವಿದ್ಯಾರ್ಥಿ ಯುಯುಸಿಎಂಎಸ್ (ಯುನಿಫೈಡ್ ಯುನಿವರ್ಸಿಟಿ ಅಂಡ್ ಕಾಲೇಜ್ ಮ್ಯಾನೇಜ್ ಮೆಂಟ್ ಸಿಸ್ಟಂ) ಬಳಸಿ ತಾನಿರುವ ಸ್ಥಳದಿಂದ ರಾಜ್ಯದ ಯಾವುದೇ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು. ವಿದ್ಯಾರ್ಥಿಗಳ ಅಂಕಪಟ್ಟಿ ಸೇರಿದಂತೆ 43 ವರ್ಷಗಳ ಶೈಕ್ಷಣಿಕ ದಾಖಲೆಗಳು ಡಿಜಿ ಲಾಕರ್ ನಲ್ಲಿರುವುದರಿಂದ ಕುಳಿತ ಜಾಗದಿಂದಲೇ ಶೈಕ್ಷಣಿಕ ದಾಖಲಾತಿಗಳನ್ನು ಅರ್ಜಿಗೆ ಲಗತ್ತಿಸಬಹುದು ಎಂದು ವಿವರಿಸಿದರು.

ಸರ್ಕಾರವು 22 ವರ್ಷಗಳ ನಂತರ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆ ಜಾರಿಗೊಳಿಸುವ ಉದ್ದೇಶ ಹೊಂದಿದೆ. ಇದಕ್ಕೆ ಮುಂಚೆ 2000ನೇ ಇಸವಿಯಲ್ಲಿ ಕರ್ನಾಟಕ ಸ್ಟೇಟ್ ಯೂನಿವರ್ಸಿಟಿ ಕಾಯ್ದೆ ತರಲಾಗಿತ್ತು. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಎಂಎಸ್ (ಲರ್ನಿಂಗ್ ಮ್ಯಾನೇಜ್ ಮೆಂಟ್) ಸಿಸ್ಟಂ, ಸ್ಮಾರ್ಟ್ ಕ್ಲ್ಯಾಸ್ ರೂಮ್ ಸೇರಿದಂತೆ ಹಲವು ಉಪಕ್ರಮಗಳಿಗೆ ಚಾಲನೆ ಕೊಡಲಾಗಿದೆ. ಯಾವುದೇ ಕಾಲೇಜಿನಲ್ಲಿ ಬೋಧಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕೆರೆಗೋಡಿ ರಂಗಾಪುರ ಮಠದ ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್, ತುಮಕೂರು ವಿ.ವಿ. ಕುಲಪತಿ ಪ್ರೊ.ಕೇಶವ, ಸಿಂಡಿಕೇಟ್ ಸದಸ್ಯರಾದ ರಾಜು, ಟಿ.ಎಸ್.ಸುನಿಲ್ ಪ್ರಸಾದ್, ಕುಲಸಚಿವ ಪ್ರೊ.ನಿರ್ಮಲ್ ರಾಜು, ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ ಅವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!