ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಮಾಡಿದ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಕೊನೆಗೊಳಿಸಿ ಹಿಂದು ಧರ್ಮ ರಕ್ಷಣೆ ಮಾಡುವ ವಾಗ್ದಾನ ನೀಡಿದರು.
ಅಪರಾಧಗಳನ್ನು ಎಂದಿಗೂ ಸಹಿಸಲಾಗದು. ಕೆಲವರು ಅಪರಾಧಗಳನ್ನು ಮಾಡಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ರಾಜಕೀಯ ಪಿತೂರಿಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಾನು ತಿರುಪತಿಯಿಂದಲೇ ಆಡಳಿತದ ಸ್ವಚ್ಛತೆಯನ್ನು ಶುರು ಮಾಡುವೆ ಎಂದು ಹೇಳಿದರು.
ದೇಶದ ರಾಜಕಾರಣದಲ್ಲಿ ಆಂಧ್ರ ಪ್ರದೇಶ ಪ್ರಮುಖ ಪಾತ್ರವಹಿಸುತ್ತಿದೆ. ಇವತ್ತಿನಿಂದ ಒಳ್ಳೆ ಆಡಳಿತವೂ ಆರಂಭವಾಗಿದೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವೆ 2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ 1 ಆಗಬೇಕು. ನಾನು ಆಂಧ್ರ ಪ್ರದೇಶವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವಾಗಿ ಮಾಡುವೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.
ಈ ಹಿಂದೆ ನಕ್ಸಲರು ನನ್ನ ಮೇಲೆ ದಾಳಿ ಮಾಡಿದಾಗ ದೇವರೇ ನನ್ನನ್ನು ರಕ್ಷಿಸಿದರು. ನಾನು ಈ ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದೆ. ರಾಜ್ಯದಲ್ಲಿ ಆರ್ಥಿಕ ಅಸಮಾನತೆಯನ್ನು ಹೊಗಲಾಡಿಸುವೆ. ಕೇವಲ ಸಂಪತ್ತನ್ನು ಸೃಷ್ಟಿಸುವುದಷ್ಟೇ ನನ್ನ ಗುರಿಯಲ್ಲ, ಅದನ್ನು ಬಡವರಿಗೂ ಹಂಚುವುದು ನನ್ನ ಉದ್ದೇಶ. ನನ್ನ ಮೊಮ್ಮಗ ದೇವಾಂಶ್ ಹುಟ್ಟಿದಾಗಿನಿಂದಲೂ ನಾನು ದೇಗುಲಕ್ಕೆ ಅನ್ನದಾನಕ್ಕೆ ಹಣ ದಾನ ಮಾಡುತ್ತಿದ್ದೇನೆ. ನಾನು ಸಮಾಜವನ್ನು ಬಡತನದಿಂದ ಮುಕ್ತಗೊಳಿಸುವುದಕ್ಕೆ ನಾನು ಯಾವಾಗಲೂ ಕೆಲಸ ಮಾಡುತ್ತೇನೆ ಎಂದು ನಾಯ್ಡು ಹೇಳಿದರು.