ನಾಮಪತ್ರ ಭರಾಟೆ ಅಂತ್ಯ: ಇನ್ನು ಶುರುವಾಗಲಿದೆ ಮೆಗಾರ‍್ಯಾಲಿಗಳ ಅಬ್ಬರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ರಾಜ್ಯ ಚುನಾವಣೆಯ (Karnataka Elections 2023) ನಾಮಪತ್ರ ಸಲ್ಲಿಕೆಯ ಭರಾಟೆ ಅಂತ್ಯಗೊಳ್ಳುತ್ತಿದ್ದಂತೆಯೇ ಮೆಗಾರ‍್ಯಾಲಿಗಳ ಅಬ್ಬರ ಶುರುವಾಗಲಿದೆ.

ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೂರ್‌ ಪ್ಲ್ಯಾನ್‌ಗಳು ಈಗಾಗಲೇ ರೆಡಿಯಾಗಿದ್ದರೆ ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಲಗ್ಗೆ ಇಡಲಿದ್ದಾರೆ.

ನಾಳೆ ಅಮಿತ್ ಶಾ 
ಚುನಾವಣಾ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಏಪ್ರಿಲ್‌ 21 ಮತ್ತು 22ರಂದು ಬೆಂಗಳೂರಿನಲ್ಲಿ ಇರಲಿದ್ದಾರೆ. ಏಪ್ರಿಲ್‌ 21ರಂದು ಬೆಂಗಳೂರಿಗೆ ಆಗಮಿಸುವ ಅವರು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ತಂಗುವರು. ಅಂದು ರಾತ್ರಿಯಿಂದಲೇ ವಿವಿಧ ಹಂತಗಳ ಚುನಾವಣಾ ಸಿದ್ಧತಾ ಮೀಟಿಂಗ್‌ಗಳನ್ನು ನಡೆಸಲಿರುವ ಅವರು, ಏಪ್ರಿಲ್‌ 22ರಂದು ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದೇ ಸಂಜೆ ದೇವನಹಳ್ಳಿಯಲ್ಲಿ ನಡೆಯುವ ರೋಡ್‌ ಶೋನಲ್ಲಿ ಭಾಗವಹಿಸುತ್ತಾರೆ. ಅಮಿತ್‌ ಶಾ ಅವರು ಏಪ್ರಿಲ್‌ 24 ಮತ್ತು 25ರಂದು ಮರಳಿ ರಾಜ್ಯಕ್ಕೆ ಬರುವ ಕಾರ್ಯಕ್ರಮವಿದೆ. ಆಗ ನಾನಾ ಕಡೆಗಳಲ್ಲಿ ರೋಡ್‌ ಶೋ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವರು ಎಂದು ತಿಳಿದುಬಂದಿದೆ.

ರಾಜ್ಯಕ್ಕೆ ರಾಹುಲ್ ಗಾಂಧಿ
ಈ ವಾರದ ಆರಂಭದಲ್ಲಿ ಕೋಲಾರ, ಬೀದರ್‌ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಏಪ್ರಿಲ್‌ 23ರಂದು ಮರಳಿ ರಾಜ್ಯಕ್ಕೆ ಬರಲಿದ್ದಾರೆ. ಅವರು ಏಪ್ರಿಲ್‌ 23ರಂದು ವಿಜಯಪುರಕ್ಕೆ ಆಗಮಿಸಲಿದ್ದು, ಆ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ.ಕೋಲಾರ ಸಮಾವೇಶದಲ್ಲಿ ಅಬ್ಬರಿಸಿದ್ದ ರಾಹುಲ್ ಗಾಂಧಿ ಅವರು ಬಾಲ್ಕಿ, ಮತ್ತು ಹುಮ್ನಾಬಾದ್ ನಲ್ಲಿ ಬಿರುಸಿನ ಪ್ರಚಾರ ನಡೆಸಿ ತೆರಳಿದ್ದರು. ಇದೀಗ ಮತ್ತೊಮ್ಮೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಹುಲ್ ಮತ ಬೇಟೆ ನಡೆಸಲಿದ್ದಾರೆ.

ಮೇ 28ಕ್ಕೆ ರಾಜ್ಯಕ್ಕೆ ಮೋದಿ?

ರಾಜ್ಯದಲ್ಲಿ ಚುನಾವಣಾ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ಒಂದು ಮೂಲದ ಪ್ರಕಾರ, ಏಪ್ರಿಲ್‌ 28ಕ್ಕೆ ಮೋದಿ ಅವರು ರಾಜ್ಯಕ್ಕೆ ಚುನಾವಣಾ ಪ್ರಚಾರದ ಎಂಟ್ರಿ ಕೊಡಲಿದ್ದಾರೆ. ಒಂದೇ ದಿನದಲ್ಲಿ ಅವರು ಮೂರು ಕಡೆ ರೋಡ್ ಶೋ ನಡೆಸಲಿದ್ದಾರೆ.

ಇದರ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಆಗಮಿಸಲಿದ್ದು, ಅವರನ್ನು ಒಕ್ಕಲಿಗರೇ ಅಧಿಕವಾಗಿರುವ ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಲು ಬಿಜೆಪಿ ಪ್ಲ್ಯಾನ್‌ ಮಾಡಿದೆ. ಕಿತ್ತೂರು ಕರ್ನಾಟಕದಲ್ಲಿ ಸ್ಮೃತಿ ಇರಾನಿ ಪ್ರವಾಸ ಮಾಡಿಸಲು ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದಾರೆ. ಇದರ ಜತೆಗೆ ರಾಜ್ಯ ನಾಯಕರ ಪ್ರವಾಸವೂ ಇರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!