ಹೊಸದಿಗಂತ ವರದಿ, ಬಾಗಲಕೋಟೆ:
ರಾಜ್ಯದಲ್ಲಿ ಯಾರು ಸಮಾಜವನ್ನು ಒಡೆದಿದ್ದಾರೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಸಮಾಜವನ್ನು ಒಡೆಯುವ ಕೆಲಸಕ್ಕೆ ಎಂದೂ ಕೈ ಹಾಕಿಲ್ಲ. ರಾಜ್ಯದಲ್ಲಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕೆಂಬುದು ನನ್ನ ಆಶಯವಾಗಿದೆ ಎಂದು ಬೃಹತ್ ಮದ್ಯಮ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಾಣಿಯವರು, ರಾಜ್ಯದ ಎಲ್ಲ ಪೀಠಗಳನ್ನು ಗೌರವದಿಂದ ಕಾಣುತ್ತಿದ್ದೇನೆ. ಸಮಾಜದ ಪೀಠಗಳ ಬಗ್ಗೆ ಕೂಡ ಬೇದಭಾವ ಹೊಂದಿಲ್ಲವೆಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ತಿರುಗೇಟು ನೀಡಿದರು.
ವೀರಶೈವ, ಲಿಂಗಾಯತ ಬೇರೆ ಎಂದು ಸಮಾಜವನ್ನು ಒಡೆದವರು ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜಕ್ಕೆ 2 ಮೀಸಲಾತಿ ಸಿಗುವ ಕುರಿತು ಎಂದೂ ವಿರೋಧವನ್ನು ಮಾಡಿಲ್ಲ. ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ಸೌಲಭ್ಯ ಸಿಗುವಂತಾಗಲಿ ಎಂದು ಪ್ರತಿಪಾದಿಸಿದ್ದೇನೆ. ಉಳಿದ ಸಣ್ಣಪುಟ್ಟ ಸಮಾಜಕ್ಕೂ ನ್ಯಾಯ ಸಿಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
3ನೇ ಪೀಠ ಆಗುವುದರಲ್ಲಿ ತಪ್ಪೇನಿಲ್ಲ : ರಾಜ್ಯದಲ್ಲಿ ಸಮಾಜ ದೊಡ್ಡದಿದೆ. ಭಕ್ತರ ಅನುಕೂಲದೃಷ್ಟಿಯಿಂದ ಪೀಠ ತಮ್ಮ ಸಮೀಪ ಇರಬೇಕು ಎಂದು ರಾಜ್ಯದಲ್ಲಿರುವ ಪಂಚಮಸಾಲಿ ಸಮಾಜದ ಪದಾಧಿಕಾರಿಗಳು,ರಾಜ್ಯಾಧ್ಯಕ್ಷರು, ಹರಿಹರ ಪೀಠದವರು, ಕೂಡಲಸಂಗಮ ಪೀಠದವರು ಮುಂದೆ ನಿಂತು 3ನೇ ಪೀಠವನ್ನು ರಚಿಸುತ್ತಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಗಳು ಮಾರ್ಗದರ್ಶನ ನೀಡಲು ಮುಂದಾಗಲಿ. ಸಮಾಜವನ್ನು ಉದ್ದಾರ ಮಾಡಲು ಪ್ರತಿಷ್ಠೆ ಮಾಡಿಕೊಳ್ಳಬಾರದು ಎಂದು ಹೇಳಿದರು.
ಎಲ್ಲದಕ್ಕೂ ಟಾಗರ್ೆಟ್ : 3ನೇ ಪೀಠ ರಚನೆ ಕುರಿತು ಹರಿಹರ ಪೀಠಾಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ. 3ನೇ ಪೀಠದ ಕುರಿತು ಆಪಾದನೆ ಮಾಡುವುದನ್ನು ಬಸವಜಯಮೃತ್ಯುಂಜಯ ಸ್ವಾಮೀಜಿಯವರು ಬಿಡಬೇಕು. ಪತ್ರಿಕೆ, ಟಿವಿಯಲ್ಲಿ ಬರಲು ಪ್ರಚಾರಕ್ಕಾಗಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ, ಸಮಾಜದ ಹಿತದೃಷ್ಟಿಯಿಂದ ಕರೆದು ಮಾತನಾಡಿದರೆ ನಾನು ಹೋಗಲು ಸಿದ್ಧನಿದ್ದೇನೆ. ಎಲ್ಲದಕ್ಕೂ ನಿರಾಣಿಯನ್ನು ಟಾರ್ಗೆಟ್ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಶ್ರೀಗಳಿಗೆ ಹೇಳಿದರು.
ಬಾಗಲಕೋಟೆ,ವಿಜಯಪುರದ ನೀರು ಗಾಳಿ ಸೇವಿಸಿಕೊಂಡೇ ಬದುಕಿದ್ದೇನೆ. ಕೆಲವರು ನನ್ನ ಬಗ್ಗೆ ಮಾತನಾಡುವುದು ಗೊತ್ತಿದೆ. ನಾನು ದಾರಿಯಲ್ಲಿ ಹೋಗುವವರಿಗೆ ಎಂದೂ ಉತ್ತರ ಕೊಡುವುದಿಲ್ಲ. ಒಂದು ದೊಡ್ಡ ಸಮಾಜದ ಜವಾಬ್ದಾರಿ ಹೊತ್ತುವರು ಹೇಳಿಕೆ ನೀಡುವಾಗಿ ಸರಿಯಾಗಿ ನೀಡುವುದನ್ನು ಕಲಿಯಬೇಕು ಎಂದು ಹೇಳಿದರು.
ಕನಸೇ ಕಂಡಿಲ್ಲ : ಮೂರನೇ ಪೀಠ ಸಿಎಂ ಆಗಲು ಮಾಡುತ್ತಿದ್ದಾರೆಂದು ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿದ ನಿರಾಣಿ ನಾನು ಎಂದೂ ಸಿಎಂ ಆಗುತ್ತೇನೆ ಎಂದು ಹೇಳಿಕೊಂಡು ತಿರುಗಾಡಿಲ್ಲ. ಮಂತ್ರಿಯಾಗದಿದ್ದಾಗೂ ಸುಮ್ಮನಿದ್ದೆ. ಪಕ್ಷ ಕರೆದು ಜವಾಬ್ದಾರಿ ನೀಡಿದೆ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ತಾವೇ ಕಲ್ಪನೆ ಮಾಡಿಕೊಂಡು ಹೇಳಿಕೆ ನೀಡುವುದನ್ನು ಶ್ರೀಗಳು ನಿಲ್ಲಿಸಬೇಕು ಎಂದರು.
ಪಕ್ಷದ ಸಂಘಟನೆಯ ಕೆಲಸ, ಇಲಾಖೆಯ ಕೆಲಸ ಜತೆಗೆ ಕ್ಷೇತ್ರದ ಅಭಿವೃದ್ದಿ ಮಾಡಲು ನನಗೆ ಸಮಯ ಸಾಕಾಗುತ್ತಿಲ್ಲ , ಇನ್ನೂ ಸಮಾಜ ಒಡೆಯುವ ಕೆಲಸವನ್ನು ನಿರಾಣಿಯವರು ಎಂದೂ ಮಾಡುವುದಿಲ್ಲ ಎಂಬುದನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಅರ್ಥ ಮಾಡಿಕೊಳ್ಳಬೇಕುಎಂದರು.