Monday, December 4, 2023

Latest Posts

ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ರೈತರಿಗೆ ನಿತ್ಯ 5 ಗಂಟೆ ವಿದ್ಯುತ್ ಒದಗಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವಂತೆ ಹಾಗೂ ಲೋಡ್‌ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸುವಂತೆ ಎಸ್ಕಾಂ ಎಂ.ಡಿ.ಗಳಿಗೆ ಸೂಚನೆ ನೀಡಿದ್ದಾರೆ.

ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್ ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು. ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್ ಗಳು ಫೀಲ್ಡ್ ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.

ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡು ಇರುವ ವಿದ್ಯುತ್ ಅನ್ನೇ ಅವರಿಗೆ ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ವಿದ್ಯುತ್‌ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆಗೆ ಸಂಬಂಧಿಸಿದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

1. ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವಂತೆ ಹಾಗೂ ಲೋಡ್‌ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

2. ಕೃಷಿ ಕ್ಷೇತ್ರದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಕನಿಷ್ಠ ಐದು ಗಂಟೆ ನಿರಂತರ ವಿದ್ಯುತ್‌ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

3.ಲಭ್ಯವಿರುವ ವಿದ್ಯುತ್ತಿನ ದಕ್ಷ ಹಂಚಿಕೆಯೂ ಅತಿ ಮುಖ್ಯವಾಗಿದ್ದು, ಎಸ್ಕಾಂಗಳ ಎಂ.ಡಿ.ಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಎಲ್ಲ ಮುಖ್ಯ ಎಂಜಿನಿಯರುಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರು ನಿರಂತರ 5 ಗಂಟೆ ವಿದ್ಯುತ್‌ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಆಗುವಂತೆ ಖಾತರಿಪಡಿಸಬೇಕು ಎಂದು ಸೂಚಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!