ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಹೊರವಲಯದ ಆನೇಕಲ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಏಕಾಏಕಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ರೋಗಿಗಳು ಹಾಗೂ ಸಾರ್ವಜನಿಕರು ಪ್ರಾಣಭಯದಿಂದ ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (OT) ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ತುಂಬೆಲ್ಲಾ ದಟ್ಟ ಹೊಗೆ ಆವರಿಸುತ್ತಿದ್ದಂತೆ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ತಪ್ಪಿದ ಭಾರಿ ಅನಾಹುತ:
ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಕೆಳ ಮಹಡಿಯಲ್ಲಿದ್ದ ರೋಗಿಗಳನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ಸದ್ಯ ತಪ್ಪಿದಂತಾಗಿದೆ.
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ:
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ. ಆನೇಕಲ್ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿತನ:
ಇಷ್ಟೊಂದು ದೊಡ್ಡ ಅವಘಡ ನಡೆದು ಎರಡು ಗಂಟೆ ಕಳೆದರೂ ತಾಲೂಕು ಆರೋಗ್ಯ ಅಧಿಕಾರಿ (THO) ರವಿ ಅವರು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಲಾಖೆಯ ಉನ್ನತ ಅಧಿಕಾರಿಯ ಈ ವರ್ತನೆಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಹಾಗೂ ವಿದ್ಯುತ್ ಸಂಪರ್ಕಗಳ ಸುರಕ್ಷತೆಯ ಬಗ್ಗೆ ತನಿಖೆ ನಡೆಸಬೇಕು ಮತ್ತು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



