ಹೊಸದಿಗಂತ ವರದಿ, ಮಂಡ್ಯ :
ಪ್ರಧಾನಮಂತ್ರಿ ಸ್ವನಿಧಿ ಯೋಜನೆ ದೇಶದಲ್ಲೇ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಮೊದಲ ಸ್ಥಾನಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಕೆ. ರಾಮದಾಸ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವನಿಧಿ ಯೋಜನೆಯಡಿ ರಾಜ್ಯದ 311 ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ 3.31 ಲಕ್ಷ ಗುರಿ ಹೊಂದಲಾಗಿದ್ದು, 3.08 ಲಕ್ಷ ಮಂದಿಗೆ ನೀಡಲಾಗಿದೆ. ನವೆಂಬರ್ ಅಂತ್ಯದೊಳಗೆ ಗುರಿ ಸಾಧನೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಈಗಾಗಲೇ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.
ಪ್ರಧಾನಮಂತ್ರಿಗಳು ರಾಜ್ಯಕ್ಕೆ 555 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಗೆ ವ್ಯಾಪಾರಸ್ಥರಲ್ಲದೆ, ಅಸಂಘಟಿತ ಕಾರ್ಮಿಕರನ್ನು ತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರಾಜ್ಯದ 32 ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಯಲ್ಲಿದ್ದು, ದೇಶದ 4.86 ಜನರಿಗೆ 9 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ 4181 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 4065 ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗಿದೆ. ಇದರಲ್ಲಿ 3795 ಮಂದಿಗೆ ಸಾಲ ನೀಡುವ ಮೂಲಕ ಶೇ. 97ರಷ್ಟು ಸಾಧನೆ ಮಡಲಾಗಿದೆ ಎಂದು ವಿವರಿಸಿದರು.
ಸ್ವನಿಧಿಯಿಂದ ಮುದ್ರಾ ಯೋಜನೆಗೆ ಪರಿವರ್ತನೆ :
ಪ್ರಾರಂಭಿಕ ಹಂತದಲ್ಲಿ 10 ಸಾವಿರ ರೂ.ಗಳ ಸ್ವನಿಧಿ ಯೋಜನೆಯ ಸಾಲ ವಿತರಿಸಲಾಗುವುದು. ಸಾಲ ಮರುಪಾವತಿ ಮಾಡಿದಲ್ಲಿ 20 ಸಾವಿರ ಹಾಗೂ 50 ಸಾವಿರಗಳಿಗೆ ಏರಿಕೆ ಮಾಡಲಾಗುತ್ತದೆ. ಈ ಸಾಲವನ್ನು ನಿಗಧಿತ ಸಮಯದೊಳಗೆ ಮರುಪಾವತಿ ಮಾಡಿದಲ್ಲಿ ಮುದ್ರಾ ಯೋಜನೆಗೆ ಪರಿವರ್ತನೆ ಮಾಡಿ 10 ಲಕ್ಷ ರೂ.ಗಳವರೆಗೆ ಯಾವುದೇ ಗ್ಯಾರಂಟಿಗಳಿಲ್ಲದೆ ಸಾಲ ನೀಡಲಾಗುತ್ತದೆ ಎಂದು ಹೇಳಿದರು.