ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಗಾಯಕ ನಿಕ್ ಜೋನಸ್ ದಂಪತಿಯ ಮುದ್ದಿನ ಮಗಳು ಮಾಲ್ತಿ ಮೇರಿ ತನ್ನ ಮುದ್ದಾದ ವಿಡಿಯೋ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾಳೆ. ಪ್ರಿಯಾಂಕಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ, ಪುಟ್ಟ ಮಾಲ್ತಿ ತಾಯಿಯ ಮಡಿಲಲ್ಲಿ ಕುಳಿತು ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ನೆಟ್ಟಿಗರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
‘ಸೌಂಡ್ ಆನ್’ ಮಾಡಿ ಎಂದ ಪ್ರಿಯಾಂಕಾ
ಪ್ರಿಯಾಂಕಾ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮಗಳನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಅವರು, ಗಾಯತ್ರಿ ಮಂತ್ರವನ್ನು ಹೇಳಲು ಪುಟ್ಟ ಮಾಲ್ತಿಗೆ ಮೆಲ್ಲಗೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. “ಇತ್ತೀಚಿನ ದಿನಗಳು.. ಕೆಲಸದ ಒತ್ತಡದ ನಡುವೆಯೂ ಸುಂದರ ತಾಣದಲ್ಲಿ.. ಸೌಂಡ್ ಆನ್ ಮಾಡಿ” ಎಂದು ಪ್ರಿಯಾಂಕಾ ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದು, “ನಿಮ್ಮ ಅಮ್ಮ ನಿನ್ನನ್ನು ತುಂಬಾ ಸಂಸ್ಕಾರಯುತವಾಗಿ ಬೆಳೆಸುತ್ತಿದ್ದಾರೆ” ಎಂದು ಕಮೆಂಟ್‌ಗಳ ಮೂಲಕ ಪ್ರಿಯಾಂಕಾ ಅವರ ಪೋಷಣೆಯನ್ನು ಕೊಂಡಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಬೀಚ್ ವಿಹಾರ ಮತ್ತು ‘ಬ್ಲೂಫ್ಲೈ’ ಸಿನಿಮಾ ಸೆಟ್‌ನ ತೆರೆಮರೆಯ ಕ್ಷಣಗಳೂ ಇವೆ.
ಮಗಳೇ ನಮ್ಮಿಬ್ಬರನ್ನು ಸೆಳೆಯುವ ಆಯಸ್ಕಾಂತ
ವೃತ್ತಿಜೀವನ ಮತ್ತು ತಾಯ್ತನವನ್ನು ನಿಭಾಯಿಸುವ ಕುರಿತು ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, “ನನ್ನ ಇಡೀ ಬದುಕು ಈಗ ಅವಳ ಸುತ್ತಲೇ ಸುತ್ತುತ್ತಿದೆ. ಅವಳು ನನ್ನ ಜೀವನದ ಅತ್ಯುತ್ತಮ ಸಾಧನೆ, ನನ್ನ ಮತ್ತು ನಿಕ್ ಪ್ರೀತಿಯ ಪ್ರತಿರೂಪ” ಎಂದಿದ್ದರು. ಒಮ್ಮೆ ತಾವು ಸಂದರ್ಶನಕ್ಕೆ ಹೋಗಿದ್ದಾಗ ಪತಿ ನಿಕ್ ಜೋನಸ್ ಮಗಳನ್ನು ಶಾಲೆಗೆ ಸಿದ್ಧಪಡಿಸಿ, ಮುದ್ದಾದ ಎರಡು ಜಡೆಗಳನ್ನು ಹಾಕಿದ್ದ ಸಿಹಿ ನೆನಪನ್ನೂ ಅವರು ಹಂಚಿಕೊಂಡಿದ್ದರು. “ನಮ್ಮ ಮಗು ನಮಗೆ ಆಯಸ್ಕಾಂತವಿದ್ದಂತೆ, ನಾವು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವಳಿಗಾಗಿ ಓಡಿ ಬರುತ್ತೇವೆ” ಎಂದು ಪ್ರಿಯಾಂಕಾ ಹೇಳಿದ್ದರು.
ಭಾರತೀಯ, ಅಮೆರಿಕನ್ ಎರಡೂ ಸಂಸ್ಕೃತಿಗಳ ಪರಿಚಯ
ಪತಿ ನಿಕ್ ಜೋನಸ್ ಕೂಡ ಮಗಳ ಬೆಳವಣಿಗೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. “ನಮ್ಮ ಮಗಳು ಭಾರತೀಯ ಮತ್ತು ಅಮೆರಿಕನ್ ಎರಡೂ ಸಂಸ್ಕೃತಿಗಳ ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಅರಿತು ಬೆಳೆಯುವುದು ನಮಗೆ ತುಂಬಾ ಮುಖ್ಯ. ತಂದೆಯಾದ ಬಳಿಕ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ” ಎಂದು ನಿಕ್ ತಿಳಿಸಿದ್ದರು. 2018ರ ಡಿಸೆಂಬರ್‌ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿ, 2022ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿಯನ್ನು ಬರಮಾಡಿಕೊಂಡಿತ್ತು.
ಇದನ್ನೂ ಓದಿ:
ರಾಜಮೌಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್
ಸಿನಿಮಾ ವಿಚಾರಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಲಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಾಹಸಮಯ ಚಿತ್ರ ‘ವಾರಾಣಸಿ’ ಮೂಲಕ ಪ್ರಿಯಾಂಕಾ ಮತ್ತೆ ಭಾರತೀಯ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಸಿನಿಮಾ 2027ರ ಏಪ್ರಿಲ್ 7ರಂದು ತೆರೆಗೆ ಬರಲಿದೆ.



