ಹೊಸದಿಗಂತ ವರದಿ ಹೊನ್ನಾವರ:
ಹೊನ್ನಾವರ ತಾಲೂಕಿನ ನೆಲವಂಕಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಸಿನಿಮಾ ಮಾದರಿಯ ಕಾರ್ಯಾಚರಣೆಯ ಮೂಲಕ ಅಪರಾಧ ನಡೆದು ಕೇವಲ ಒಂದು ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ನೆಲವಂಕಿ ರಸ್ತೆ ಮಾರ್ಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಹರಿದು ಪರಾರಿಯಾಗಲು ಯತ್ನಿಸಿದ್ದಾರೆ.
ಕಳ್ಳರು ಸರ ಹಿಡಿದು ಓಡುತ್ತಿದ್ದಂತೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಕಿರುಚಾಟ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ ಸಮೀಪದ ಯುವಕನೊಬ್ಬ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಕಳ್ಳರು ಬೈಕ್‌ನಲ್ಲಿ ಪರಾರಿಯಾದರಾದರೂ, ಆ ಯುವಕ ಅವರ ಚಹರೆ ಮತ್ತು ಬೈಕ್‌ನ ಗುರುತುಗಳನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ:
ಯುವಕ ನೀಡಿದ ನಿಖರ ಮಾಹಿತಿ ಹಾಗೂ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ತಾಲೂಕಿನಾದ್ಯಂತ ನಾಕಾಬಂಧಿ ಮಾಡಿದರು. ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಕಳ್ಳರನ್ನು ಹೊನ್ನಾವರದ ಬಳಿ ಅಡ್ಡಗಟ್ಟಿದ ಪೊಲೀಸರು, ಘಟನೆ ನಡೆದ ಕೇವಲ ಒಂದು ಗಂಟೆಯ ಅವಧಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



