ಬೇಹುಗಾರಿಕೆ ಆರೋಪ: 8 ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕತಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷ ಕತಾರ್‌ನಲ್ಲಿ ಬಂಧಿಸಲಾಗಿದ್ದ ಎಂಟು ಮಂದಿ ಭಾರತೀಯರಿಗೆ ಕತಾರ್‌ನ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿರುವ ಬಗ್ಗೆ ವಿದೇಶಾಂಗ ಸಚಿವಾಲಯ ಗುರುವಾರ ತೀವ್ರ ಕಳವಳ, ಆಘಾತ ವ್ಯಕ್ತಪಡಿಸಿತು. ಕತಾರ್‌ನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಎಂಟು ಮಂದಿ ಭಾರತೀಯರನ್ನು ಪ್ರಕರಣದಲ್ಲಿ ಸಿಲುಕಿಸಿರುವಲ್ಲಿ ಕುಖ್ಯಾತ ಪಾಕಿಸ್ತಾನಿ ಐಎಸ್‌ಐಯ ಪಿತೂರಿಯಿದೆ ಎನ್ನಲಾಗಿದ್ದು, ಈ ಭಾರತೀಯರಿಗೆ ಎಲ್ಲ ರೀತಿಯ ಕಾನೂನು ನೆರವು ನೀಡಿಕೆ ಸಾಧ್ಯತೆಗಳ ಬಗ್ಗೆ ಭಾರತ ಸರಕಾರ ಚಿಂತನೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

ನಾವು ಈ ತೀರ್ಪಿನ ಬಗ್ಗೆ ತೀವ್ರ ಆಘಾತಗೊಂಡಿದ್ದೇವೆ. ತೀರ್ಪಿನ ವಿವರಗಳಿಗಾಗಿ ನಾವು ಕಾಯುತ್ತಿದ್ದೇವೆ. ನಾವು ಆ ಎಂಟು ಮಂದಿಯ ಕುಟುಂಬ ಸದಸ್ಯರು ಮತ್ತು ಕಾನೂನು ನೆರವು ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ಕಾನೂನು ಮಾರ್ಗಗಳ ಶೋಧದಲ್ಲಿದ್ದೇವೆ . ಈ ಪ್ರಕರಣವನ್ನು ನಾವು ಅತ್ಯಂತ ಆದ್ಯತೆಯಲ್ಲಿ ಪರಿಗಣಿಸಿದ್ದು, ಕತಾರ್ ಸರಕಾರದ ಜೊತೆ ನಾವು ತೀರ್ಪಿನ ವಿಷಯವನ್ನು ಎತ್ತಲಿದ್ದೇವೆ ಎಂಬುದಾಗಿ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಈ ಎಂಟು ಮಂದಿ ಭಾರತೀಯ ನೌಕಾ ಪಡೆಯ ನಿವೃತ್ತ ಅಕಾರಿಗಳಾಗಿದ್ದು, ಕತಾರ್‌ನಲ್ಲಿನ ರಕ್ಷಣಾ ಸೇವೆಗಳನ್ನು ಒದಗಿಸುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ೨೦೨೨ರಲ್ಲಿ ಇವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ಈ ಎಂಟು ಮಂದಿಯನ್ನು ಯಾಕೆ ಬಂಧಿಸಲಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ವಿವರಗಳನ್ನು ನೀಡದ ಕತಾರ್ ಸರಕಾರ ಅವರನ್ನು ರಹಸ್ಯ ಬಂಧನದಲ್ಲಿರಿಸಿತ್ತು.ಕತಾರ್ ಇವರಿಗೆ ಕಾನ್ಸುಲರ್ ಲಭ್ಯತೆಯ ಅವಕಾಶ ಕಲ್ಪಿಸಿದ್ದು, ಇದೊಂದು “ಸೂಕ್ಷ್ಮ”ವಿಚಾರವಾಗಿದ್ದು, ಈ ಪ್ರಕರಣ ಭಾರತ ಸರಕಾರದ “ಆದ್ಯತೆ”ಯ ವಿಷಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದರು.

ಪಾಕ್ ಐಎಸ್‌ಐ ಕುತಂತ್ರ
ಕತಾರ್‌ನ ಎಮಿರಿ ನೌಕಾ ಪಡೆಯ ತರಬೇತಿಯಲ್ಲಿ ತೊಡಗಿಕೊಂಡಿದ್ದ ಈ ಎಂಟು ಮಂದಿ ಮಾಜಿ ನೌಕಾ ಪಡೆ ಸಿಬ್ಬಂದಿಗಳನ್ನು ಬಂಧಿಸುವಂತೆ ಮಾಡುವಲ್ಲಿ ಕಂಪೆನಿಯ ಇನ್ನೊಂದು ಎದುರಾಳಿ ಕಂಪೆನಿಯ ಕೈವಾಡ ಹಾಗೂ ಇದರ ಹಿಂದೆ ಪಾಕಿಸ್ತಾನದ ಕುಖ್ಯಾತ ಐಎಸ್‌ಐಯ ಪಿತೂರಿ ಇದೆ ಎನ್ನಲಾಗಿದೆ.ಈ ಎಂಟು ಮಂದಿಗೆ ಕಾನ್ಸುಲರ್ ಲಭ್ಯತೆಯ ಅವಕಾಶ ಒದಗಿಸಲಾಗಿತ್ತಾದರೂ , ಇವರ ವಿರುದ್ಧ ಇರುವ ಆರೋಪ ಏನೆಂಬ ಬಗ್ಗೆ ಕತಾರ್ ಯಾವುದೇ ಮಾಹಿತಿ ನೀಡಿರಲಿಲ್ಲ.

ಈ ಎಂಟು ಮಂದಿಯ ವಿರುದ್ಧ ಗೂಢಚರ್ಯೆ ನಡೆಸಿದ ಆರೋಪ ಹೊರಿಸಲಾಗಿದ್ದಾಗಿ ದ ಟ್ರಿಬ್ಯೂನ್ ವರದಿ ಮಾಡಿತ್ತು.ಇವರು ಇಸ್ರೇಲ್ ಪರ ಗೂಢಚರ್ಯೆ ಮಾಡಿದ್ದಾಗಿ ಆರೋಪಿಸಲಾಗಿದೆ.ಈ ಎಂಟು ಮಂದಿಯನ್ನು ಕ್ಯಾ.ನವತೇಜ್ ಸಿಂಗ್ ಗಿಲ್, ಕ್ಯಾ.ಬೀರೇಂದ್ರ ಕುಮಾರ್ ವರ್ಮ, ಕ್ಯಾ.ಸೌರಭ್ ವಾಸಿಷ್ಠ,ಅಮಿತ್ ನಾಗಪಾಲ್, ಪೂರ್ಣೇಂದು ತಿವಾರಿ, ಸುಗುಣಾಕರ್ ಪಕಳ, ಸಂಜೀವ್ ಗುಪ್ತ, ರಾಗೇಶ್ ಎಂದು ಗುರುತಿಸಲಾಗಿದೆ.

ಇಟೆಲಿ ತಂತ್ರಜ್ಞಾನ ಆಧರಿತ ಸಣ್ಣ ಸಶಸ್ತ್ರ ಸಬ್‌ಮೆರೀನ್‌ಗಳಂತಹ ಅತ್ಯಂತ ಸೂಕ್ಷ್ಮ ಯೋಜನೆಗಳ ಮೇಲೆ ಕೆಲಸ ಮಾಡುವ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಕಂಪೆನಿಯಲ್ಲಿ ಹಲವು ಭಾರತೀಯ ನೌಕಾ ಪಡೆಯ ನಿವೃತ್ತ ಅಕಾರಿಗಳೂ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ದಹ್ರಾ ಗ್ಲೋಬಲ್‌ನ ಸಿಇಒ ಆಗಿರುವ ಓಮನ್‌ನ ಮಾಜಿ ವಾಯುಪಡೆ ಅಕಾರಿ ಖಮೀಸ್ ಅಲ್-ಅಜ್ಮಿ ಹಾಗೂ ಖತಾರ್‌ನ ಅಂತಾರಾಷ್ಟ್ರೀಯ ಸೇನಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಮೇ.ಜ.ತಾರೀಖ್ ಖಾಲೀದ್ ಅಲ್ ಒಬೈಡ್ಲಿ ಅವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಾಗಿತ್ತು ಎಂದು ಟ್ರಿಬ್ಯೂನ್ ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!