Sunday, December 3, 2023

Latest Posts

ಹಗಲು ಹೊತ್ತು ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಿ: ಶಿವಮೊಗ್ಗ ಜಿಲ್ಲಾ ರೈತ ಸಂಘ ಒತ್ತಾಯ

ಹೊಸದಿಗಂತ ವರದಿ,ಶಿವಮೊಗ್ಗ:

ಹಗಲು ಹೊತ್ತು ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ಗುರುವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ (ಡಾ. ಎಚ್.ಗಣಪತಿಯಪ್ಪ ಸ್ಥಾಪಿತ) ತಾಲ್ಲೂಕು ಘಟಕದಿಂದ  ಸಾಗರ  ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ರಾಜ್ಯ ಸರ್ಕಾರ ಗೃಹಲಕ್ಷ್ಮೀ ಹೆಸರಿನಲ್ಲಿ ಎರಡು ಸಾವಿರ ರೂಪಾಯಿ ಕೊಡುತ್ತಿದ್ದೇವೆ ಎಂದು ಜನರನ್ನು ಮಂಗ ಮಾಡುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಇರುವುದರಿಂದ ರೈತರ ಫಸಲು ನಿರ್ನಾಮವಾಗುತ್ತಿದೆ. ಈಗ ರೈತರು ಫಸಲು ತೆಗೆಯುವ ಸಮಯವಾಗಿದೆ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ಇರುವುದರಿಂದ ಜಮೀನಿಗೆ ನೀರು ಹರಿಸಲು ಆಗುತ್ತಿಲ್ಲ. ಒಂದರ್ಥದಲ್ಲಿ ಸರ್ಕಾರವೇ ರೈತರನ್ನು ಕೊಲೆ ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು.

ಶಾಸಕರು ಸಿಗುತ್ತಿಲ್ಲ
ಹಾಲಿ ಶಾಸಕರು ಅಧಿಕಾರ ಇಲ್ಲದೆ ಇರುವಾಗ ರೈತ ಸಂಘದ ಪ್ರತಿಭಟನೆಗಳಿಗೆ ಪದೇಪದೇ ಭೇಟಿ ನೀಡಿ ಫೋಟೋ ಹೊಡೆಸಿಕೊಂಡು ಪ್ರಚಾರ ಪಡೆಯುತ್ತಿದ್ದರು. ಈಗ  ಅವರ ಸರ್ಕಾರವೇ ಅಧಿಕಾರದಲ್ಲಿದೆ. ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಲು ಮನವಿ ಸ್ವೀಕರಿಸಿ ಎಂದು ಮೂರು ಬಾರಿ ಅವರ ಕಚೇರಿಗೆ ಅಲೆದಿದ್ದೇವೆ. ಈಗ ಅವರಿಗೆ ರೈತರ ನೆನಪಾಗುತ್ತಿಲ್ಲ. ತಕ್ಷಣ ರಾಜ್ಯ ಸರ್ಕಾರ ರೈತರಿಗೆ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಟಿ.ಸಿ. ಖರೀದಿ ಮತ್ತು ರಿಪೇರಿಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವ ದೂರುಗಳಿರುವ ಹಿನ್ನೆಲೆಯಲ್ಲಿ ಅದನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು. ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಸಾವಿರಾರು ಕುಟುಂಬ ಸಂತ್ರಸ್ತವಾಗಿದೆ. ನಮ್ಮ ನೀರಿನಿಂದ ತಯಾರಿಸಿದ ವಿದ್ಯುತ್ ನಮ್ಮದೇ ಜಿಲ್ಲೆಯಲ್ಲಿ ಸಮರ್ಪಕ ವಿತರಣೆ ಮಾಡುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!