ಹೊಸದಿಗಂತ ವರದಿ,ಮಂಗಳೂರು:
ಬಡವ ವರ್ಗದ ಜನರ ಅತಿ ಬುದ್ದಿವಂತ ಮಕ್ಕಳಿಗೆ ಅಂತಾರಾಷ್ಟ್ರೀಯ ಮಟ್ಟದ ಜ್ಞಾನ ನೀಡುವ ಶಾಲೆಗಳನ್ನು ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ಆರಂಭಿಸಲಾಗುವುದು. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದಿಂದಲೂ ಇಂತಹ ಶಾಲೆ ಸ್ಥಾಪಿಸಲಾಗುವುದು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣ ನೀಡಬೇಕು ಎಂಬ ತುಡಿತದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಆದಿಚುಂಚನಗಿರಿ ಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಬಡವರ್ಗದ ಬುದ್ದಿವಂತ ಮಕ್ಕಳಿಗೂ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ದೃಷ್ಟಿಯಿಂದ ಆರನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ನೀಡುವ ಶಾಲೆಗಳನ್ನು ಶೀಘ್ರ ಸ್ಥಾಪಿಸಲಾಗುವುದು. ಈ ಶಾಲೆಗೆ ಅರ್ಜಿ ಹಾಕುವ ವಿಧಾನ ಇರುವುದಿಲ್ಲ. ಮಠ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿಕೊಳ್ಳಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂತ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಮಾಜಕ್ಕೆ ಸಂತರ ಅನಿವಾರ್ಯವಿದೆ. ಲೌಕಿಕ ಶಿಕ್ಷಣದ ಜತೆ ಆಧ್ಯಾತ್ಮಿಕ ಶಿಕ್ಷಣ ಬೇಕು ಎಂದರು.
ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್. ಪ್ರಕಾಶ್ ಮಾತನಾಡಿ, ನಾಥ ಪರಂಪರೆಗೆ ಸೇರಿದ ಶ್ರೇಷ್ಠವಾದ ಶ್ರೀ ಆದಿಚುಂಚನಗಿರಿ ಮಠ ದೇಶ, ಸಮಾಜವನ್ನು ಉಳಿಸುವ ಕಾರ್ಯ ಮಾಡುತ್ತಿದೆ. ಬಡವರು, ಅನಾರೋಗ್ಯ ಪೀಡಿತರು, ಸಮಾಜದ ಕಷ್ಟಕಾರ್ಪಣ್ಯಗಳನ್ನು ವೀಕ್ಷಿಸಿ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಸಮಾಜಕ್ಕೆ ಕೆಲಸ ಮಾಡಲು ಆರಂಭಿಸಿದರು. ಅದರ ಭಾಗವಾಗಿ ಮಂಗಳೂರಿನಲ್ಲಿ ಆರಂಭಗೊಂಡ ಶಾಖಾ ಮಠ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಈ ಹಬ್ಬವನ್ನು ಜನರ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 25 ಮಂದಿ ಅಪೂರ್ವ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ,ಮಂಗಳೂರು ಕಾವೂರಿನಲ್ಲಿ 54 ಮಕ್ಕಳಿಂದ ಆರಂಭಗೊಂಡ ಜಿಜಿಎಸ್ ಶಿಕ್ಷಣ ಸಂಸ್ಥೆ ಇಂದು ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ದಿವ್ಯಾನುಗ್ರಹದಿಂದ ಬೆಳೆದುನಿಂತು ರಜತಮಹೋತ್ಸವ ಆಚರಿಸುತ್ತಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ, ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ನ.26 ಹಾಗೂ ಜ.1 ಮತ್ತು 2 ರಂದು ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಗುರುವಂದನೆ ಹಾಗೂ ರಜತ ತುಲಾಭಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಡಾ.ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸ್ಥಳೀಯ ಕಾರ್ಪೋರೇಟರ್ ಸುಮಂಗಳಾ ಮುಖ್ಯ ಅತಿಥಿಯಾಗಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್ ವಂದಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಸಿ. ಕಾರ್ಯಕ್ರಮ ನಿರೂಪಿಸಿದರು.