ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪನೆ: ಕಿಯೋನಿಕ್ಸ್ ಚೇರ್‌ಮನ್ ಶರತ್‌ ಬಚ್ಚೇಗೌಡ

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರಿನಲ್ಲಿ ಕಿಯೋನಿಕ್ಸ್ ಐಟಿ ಪಾರ್ಕ್ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಕಿಯೋನಿಕ್ಸ್ ಚೇರ್‌ಮನ್ ಶರತ್ ಬಚ್ಚೇಗೌಡ ಹೇಳಿದರು.

ಮಂಗಳೂರಿನಲ್ಲಿಂದು ನಡೆದ ‘ಮಂಗಳೂರು ಟೆಕ್ನೋವಾಂಜಾ 3.0’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಟಿ ಪಾರ್ಕ್ ನಾಲ್ಕು ಎಕರೆ ಜಾಗ ಹೊಂದಿರಲಿದ್ದು, ಮುಖ್ಯವಾಗಿ ಐಟಿ, ಬಿಟಿಯ ಜತೆಗೆ ಮರೈನ್ ಬಯೋಟೆಕ್ನಾಲಜಿಯನ್ನು ಕೂಡ ಬಳಸಿಕೊಳ್ಳಲಾಗುವುದು ಎಂದರು.

ಸ್ಥಳೀಯವಾಗಿ ಉದ್ಯೋಗ ನೀಡಿದರೆ ಮಾತ್ರ ಆರ್ಥಿಕ ಅಭಿವೃದ್ಧಿಯ ಜತೆಗೆ ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯವಿದೆ. ಇದೇ ಕಾರಣದಿಂದ ಬೆಂಗಳೂರು ಬಿಟ್ಟು ಉಳಿದ ನಗರಗಳಲ್ಲಿ ಕೂಡ ಉದ್ಯೋಗ ಅವಕಾಶ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ಟೈಯರ್-೨ ಮತ್ತು ೩ ಸಿಟಿಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಸೈನ್ಸ್ ಆಂಡ್ ಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಅವರು ಮಾತನಾಡಿ, ಈಗಾಗಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬಳ್ಳಾರಿಯಲ್ಲಿ ಐಟಿ, ಬಿಟಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸರಕಾರ ಕೂಡ ಹಲವು ಪಾಲಿಸಿಗಳನ್ನು ತರುವ ಮೂಲಕ ಈ ಕ್ಷೇತ್ರದಲ್ಲಿ ಸಾಧಿಸುವ ಮಂದಿಗೆ ನೆರವಾಗುತ್ತಿದೆ. ಸ್ಟಾರ್ಟ್ ಆಪ್ ಕಂಪನಿಗಳಿಗೆ ಈ ಹಿಂದೆ ಸರಕಾರದ ಬಿಡ್‌ಗಳಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ ಎನ್ನುವುದಕ್ಕೆ ಈ ನಿಯಮವಳಿಯಲ್ಲಿ ಸರಳತೆಯನ್ನು ತರಲಾಗಿದ್ದು, ಈ ಕ್ಷೇತ್ರದವರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ಒಂದರಲ್ಲಿಯೇ 14 ಬಿಸಿನೆಸ್ ಎಕ್ಸಲೆನ್ಸ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಸ್ಟಾರ್ಟ್ ಆಪ್ ಇನ್‌ಕ್ಯುಬ್ಯುಶನ್ ಸೆಂಟರ್‌ಗಳಾಗಿಯೂ ಕೂಡ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇದು ಖಾಸಗಿ ಹಾಗೂ ಸರಕಾರ ಜತೆಯಾಗಿ ನಡೆಸುತ್ತಿರುವ ಕೇಂದ್ರಗಳಾಗಿದೆ. ಮಂಗಳೂರಿನಲ್ಲಿ ಈಗ ಒಂದು ಕೇಂದ್ರವಿದ್ದು ಇದನ್ನು ಈ ಬಾರಿ ಮೇಲ್ದರ್ಜೆಗೆ ಏರಿಸುವ ಕೆಲಸವಾಗುತ್ತಿದೆ ಎಂದು ಏಕರೂಪ್ ಕೌರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!