ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ಶತಾಯ ಗತಾಯವಾಗಿ ಪ್ರಯತ್ನಿಸುತ್ತಿದ್ದು, ಈಗಾಗಲೇ ಅನೇಕ ಯೋಜನೆಗಳನ್ನು ಘೋಷಿಸಿದ್ದು, ಇದೀಗ ರಾಜ್ಯದಲ್ಲಿ ನಿರುದ್ಯೋಗ (Unemployment) ನಿವಾರಿಸಲು ಸರ್ಕಾರಿ ಹುದ್ದೆಗಳ ಭರ್ತಿಯೊಂದಿಗೆ ಖಾಸಗಿ ಉದ್ಯೋಗದ ವಿನಿಮಯ ಕೇಂದ್ರ ಸ್ಥಾಪಿಸುವುದಾಗಿ ಡಿಕೆ ಶಿವಕುಮಾರ್ (DK Shivakumar) ಘೋಷಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ (BJP) ಸರ್ಕಾರದಿಂದ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ, ಕಾಂಗ್ರೆಸ್ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಉದ್ಯೋಗ ವಿನಿಮಯ ಕೇಂದ್ರ (Private employment exchange) ಸ್ಥಾಪಿಸಲಾಗುವುದು. ನಿರುದ್ಯೋಗಿಗಳು ಈ ವಿನಿಯಮ ಕೇಂದ್ರದ ಮೂಲಕ ಉದ್ಯೋಗದ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗಲಿದೆ ಎಂದರು.
ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದ ಅವಧಿವರೆಗೆ ಮಾಸಿಕ 3,000 ರೂ. ಮತ್ತು ಡಿಪ್ಲೊಮಾ ವ್ಯಾಸಂಗ ಮಾಡಿದರೆ 1,500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಶೀಘ್ರದಲ್ಲೇ ನಾವು ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡುತ್ತೇವೆ. ಎಲ್ಲಾ ನಿರುದ್ಯೋಗಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಿ. ಯಾರಿಗೆ 3ಸಾವಿರ ಬೇಕೋ, ಯಾರಿಗೆ ಒಂದೂವರೆ ಸಾವಿರ ಬೇಕೋ ಇವರೆಲ್ಲರೂ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳಿದರು.