April 16, 2026
Thursday, April 16, 2026
spot_img

ಇಥೆನಾಲ್ ಟ್ಯಾಂಕರ್ ಪಲ್ಟಿ: ಮುಗಿಲೆತ್ತರಕ್ಕೆ ಚಿಮ್ಮಿದ ಜ್ವಾಲೆ, ಸ್ತಬ್ಧಗೊಂಡ ಅಂಕೋಲಾ-ಹುಬ್ಬಳ್ಳಿ ಸಂಚಾರ

ಹೊಸದಿಗಂತ ಅಂಕೋಲಾ:

ತಾಲೂಕಿನ ಕಂಚಿನಬಾಗಿಲ ಬಳಿಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಮಧ್ಯಾಹ್ನ ಭೀಕರ ಅಪಘಾತವೊಂದು ಸಂಭವಿಸಿದೆ. ಇಥೆನಾಲ್ ರಾಸಾಯನಿಕ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರುಕಲಾಗಿದೆ.

ಯಲ್ಲಾಪುರದಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಈ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಕೂಡಲೇ ಇಥೆನಾಲ್ ಸೋರಿಕೆಯಾಗಿ ಬೆಂಕಿ ಧಗಧಗಿಸಲು ಆರಂಭಿಸಿದ್ದು, ದಟ್ಟವಾದ ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿತ್ತು. ಬೆಂಕಿಯ ತೀವ್ರತೆಗೆ ಲಾರಿಯ ಟಯರ್‌ಗಳು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಈ ಅನಾಹುತದಲ್ಲಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸುಟ್ಟ ಗಾಯಗಳಾಗಿರುವ ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯ ಕೆನ್ನಾಲಿಗೆಗೆ ರಸ್ತೆಯ ಪಕ್ಕದಲ್ಲಿದ್ದ ಗಿಡಮರಗಳು ಭಸ್ಮವಾಗಿವೆ. ಅಗ್ನಿಶಾಮಕ ದಳ ಮತ್ತು ಹೆದ್ದಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟರೂ ಬೆಂಕಿಯನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಅಂಕೋಲಾ-ಹುಬ್ಬಳ್ಳಿ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಹೆದ್ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಸ್ಥಳಕ್ಕೆ ಡಿ.ವೈ.ಎಸ್.ಪಿ ಗಿರೀಶ, ತಹಸೀಲ್ದಾರ್ ನಿಶ್ಚಲ ನರೋನ್ನಾ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !