ಹೊಸದಿಗಂತ ಸಕಲೇಶಪುರ:
ತಾಲ್ಲೂಕಿನ ಜಂಬರಡಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಮತ್ತೊಂದು ಪೈಪ್‌ಲೈನ್ ಶನಿವಾರ ಒಡೆದು ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿದಿದೆ.
ಪೈಪ್ ಒಡೆದು ಎತ್ತರದಿಂದ ತಗ್ಗು ಪ್ರದೇಶಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದಿದ್ದು ಆ ಭಾಗದ ಹಲವು ಮನೆ ಹಾಗೂ ಜಮೀನುಗಳು ಜಲಾವೃತಗೊಂಡಿವೆ. ಅಲ್ಲದೇ ರಸ್ತೆಗಳು ಕೆರೆಗಳಂತಾಗಿವೆ. ಎಸ್ಟೇಟ್‌ಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣ ಹಾನಿ ಉಂಟು ಮಾಡಿದೆ.
ಮೊದಲಿನಿಂದಲೂ ಅವಾಂತರಗಳ ನಡುವೆಯೇ ಮುಂದುವರಿದು, ವಾರದ ಹಿಂದೆಯಷ್ಟೇ ಉದ್ಘಾಟನೆಗೊಂಡಿರುವ ಎತ್ತಿನಹೊಳೆ ಯೋಜನೆ ಬಹುಪಾಲು ಕಳಪೆ ಕಾಮಗಾರಿಯಿಂದ ಕೂಡಿರುವ ಪರಿಣಾಮ ಈ ವರೆಗೆ ನಾಲ್ಕಾರು ಕಡೆ ಪೈಪ್‌ಲೈನ್, ನಾಲೆಬದು ಒಡೆದು ಆತಂಕ ಸೃಷ್ಟಿಸಿದೆ. ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಇದೇ ಎಸ್ಟೇಟ್‌ನಲ್ಲಿ ಕಳೆದ ಹದಿನೈದು ದಿನಗಳ ಹಿಂದೆಯೂ ಪೈಪ್‌ಲೈನ್ ಒಡೆದಿತ್ತು. ಅದನ್ನು ಯೋಜನೆ ಅಧಿಕಾರಿಗಳು ದುರಸ್ತಿಪಡಿಸಿದ್ದರು. ಇದೀಗ ಅದೇ ಭಾಗದ ಮತ್ತೊಂದು ಪೈಪ್‌ಲೈನ್ ಒಡೆದು ಹೋಗಿದ್ದು, ಹೆಬ್ಬನಹಳ್ಳಿ ವರೆಗೆ ನಿರಂತರ ನೀರು ಪಂಪ್ ಮಾಡುತ್ತಿರುವ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.