ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರುಶನ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿ, ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು.
ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಹೆಚ್‌ಡಿಡಿ, ಶಿವನ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ . ಇಲ್ಲಿಗೆ ಭೇಟಿ ನೀಡಿ ಶಿವನ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.
ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು. ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ದೇವೇಗೌಡರು, ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು.