ನಾನಿವತ್ತು ಬರೆಯೋ ಲೇಖನ ಯಾರು ತಮ್ಮ ಮನೆ, ಊರು, ಅಮ್ಮನನ್ನ ಬಿಟ್ಟು ದೂರದ ಊರಿನಲ್ಲಿ ಹೊಟ್ಟೆಪಾಡಿಗೋಸ್ಕರ ಮೂರು ಹೊತ್ತಿನ ಊಟಕ್ಕೋಸ್ಕರ ದುಡಿತ ಇರ್ತಾರೋ ಅವ್ರಿಗೆ. ಯಾಕಂದ್ರೆ ಮನೇಲ್ ಇದ್ದು ತಮ್ಮೂರಲ್ಲಿ ಇದ್ದು ಕೆಲಸ ಮಾಡೋರ್ಗಿಂತ ಈ ರೀತಿ ದೂರದ ಊರಲ್ಲಿದ್ದು ಕೆಲಸ ಮಾಡೋರಿಗೆ ಅಮ್ಮನ ಕೈತುತ್ತಿನ ಬೆಲೆ ಏನು ಅನ್ನೋದು ಅರ್ಥ ಆಗೋದು. ಏನಂತೀರಾ?
ನಾವು ಎಷ್ಟೇ ದೊಡ್ಡ ಹೋಟೆಲ್ ಗೆ ಹೋಗಿ ಯಾವುದೇ ಇಷ್ಟವಾದ ತುಂಬಾ ಕಾಸ್ಟ್ಲಿಯಾದ ತಿಂಡಿ ಆರ್ಡರ್ ಮಾಡಿದ್ರೂ ಫಸ್ಟ್ ತುತ್ತು ಬಾಯಿಗೆ ಇಟ್ಟ ತಕ್ಷಣ ‘ಅಮ್ಮ ಮಾಡ್ತಿದ್ದ ಊಟ ಇದಕ್ಕಿಂತ ತುಂಬಾ ರುಚಿಯಾಗಿತ್ತು’ ಅನ್ನೋ ಫೀಲಿಂಗ್ ಕಾಡದೇ ಇರಲ್ಲ. ಈ ಕಾಸ್ಟ್ಲಿ ಹೋಟೆಲ್ಗಳು ಹೊಟ್ಟೆ ತುಂಬಿಸಬಹುದು ಆದ್ರೆ ಅಮ್ಮನ ಕೈ ತುತ್ತಿಗೆ ಮಾತ್ರ ಮನಸ್ಸನ್ನ ತುಂಬಿಸುವ ಶಕ್ತಿ ಇದೆ.

ಅಯ್ಯೋ ಅಮ್ಮ ಯಾವಾಗ್ಲೂ ಇದೇ ಊಟನಾ?
ನಾವು ಚಿಕ್ಕವರಿರಬೇಕಾದ್ರೆ ಅನ್ನ, ಸಾರು, ಒಂದು ಪಲ್ಯ ಮಾಡಿ ಬಡಿಸೋಳು. ಆದ್ರೆ ನಾವೆಲ್ಲ ‘ಅಯ್ಯೋ’ ಅಂತ ಅನ್ಕೊಂಡು ಮುಖ ಸಿಂಡರಿಸಿ ಬಿಡ್ತಿದ್ವಿ. ‘ನಾನಿದನ್ನ ತಿನ್ನಲ್ಲ ಬೇರೆ ಏನಾದರೂ ಮಾಡಿ ಕೊಡು’ ಅಂತ ಹಠ ಮಾಡ್ತಿದ್ವಿ. ಆದರೆ ಈಗ ಅಮ್ಮ ಮಾಡೋ ಆ ತಿಳಿ ಸಾರು ಸಿಕ್ಕರೂ ಸಾಕು ಅದನ್ನೇ ಅಮೃತ ಅನ್ನೋ ರೀತಿ ತಿಂದು ಖಾಲಿ ಮಾಡ್ಬಿಡ್ತೀವಿ.
ದೂರವಾದಾಗಲೇ ಆದರೆ ಬೆಲೆ ಗೊತ್ತಾಗೋದು
ಓದು, ಕೆಲಸ ಅದು ಇದು ಅಂತ ಹೇಳಿ ಜವಾಬ್ದಾರಿಗಳಿಂದ ಮನೆಯಿಂದ ತುಂಬಾ ದೂರ ಬಂದುಬಿಟ್ಟಿರ್ತೀವಿ ಮನೆ, ಅಪ್ಪ, ಅಮ್ಮನ ನೆನಪಿನ ಜೊತೆಗೆ ಅಮ್ಮನ ಊಟದ ನೆನಪು ಕೂಡ ಪಿಜಿ ಹೋಟೆಲ್ ನಲ್ಲಿ ತಿನ್ನೋ, ಪ್ರತಿಯೊಂದು ತುತ್ತಿನಲ್ಲೂ ಕಾಡುತ್ತಿರುತ್ತೆ. ಅಮ್ಮ ಫೋನ್ನಲ್ಲಿ ಮಾತಾಡೋವಾಗ ‘ಊಟ ಆಯ್ತಾ’ ಅಂತ ಕೇಳಿದ್ರೆ ಸಾಕು ಅಮ್ಮನ ಕೈ ರುಚಿ ನೆನಪಾಗಿ ಕಣ್ಣು ತುಂಬೋದಂತು ಗ್ಯಾರಂಟಿ.

ಅಮ್ಮನ ಅಡುಗೆ ರುಚಿ ರಹಸ್ಯ
ನಮ್ಮಮ್ಮ ಅಡುಗೆ ಮಾಡೋವಾಗ ಇಷ್ಟೇ ಮಸಾಲಾ ಹಾಕ್ಬೇಕು ಅಷ್ಟೇ ಹಾಕ್ಬೇಕು ಅಂತ ಯಾವುದೇ ಅಳತೆ ಇಲ್ಲ. ಆದ್ರೂ ಅದೊಂಥರಾ ರುಚಿ. ಈ ಮಸಾಲೆ ಪದಾರ್ಥ ಹಾಕೋದಕ್ಕಿಂತ ಹೆಚ್ಚಾಗಿ ಅಮ್ಮ ತನ್ನ ಪ್ರೀತಿನ ಹಾಕಿರ್ತಾಳೆ ಅದಕ್ಕೆ ಅಮ್ಮನ ಅಡುಗೆ ಅಷ್ಟೊಂದು ರುಚಿ ಅನ್ಸೋದು. ನನ್ನ ಪ್ರಕಾರ ಅಮ್ಮನ ಅಡುಗೆ ರುಚಿ ರಹಸ್ಯ ಇದೇ ಅನ್ಸುತ್ತೆ ಅಲ್ವಾ?
ಕೆಲವೊಂದು ರುಚಿಯನ್ನು ನಾಲಗೆಯಿಂದ ಅಲ್ಲ ನೆನಪುಗಳಿಂದ ಸವಿಬೇಕು ಅದ್ರಲ್ಲೊಂದು ಅಮ್ಮನ ಕೈತುತ್ತು……
ಆಶಿಕಾ ಸಾಲೆತ್ತೂರು



