-ಗಣೇಶ ಭಟ್, ಗೋಪಿನಮರಿ
ಶತ್ರು ತನಗಿಂತ ಬಲಿಷ್ಠವಾಗಿದ್ದಾನೆ ಎಂಬುದು ಅರಿವಾದ ಮೇಲೆಯೂ ಹೋರಾಡುವುದಿದೆಯಲ್ಲ…. ಅದು ಅಸಾಧಾರಣ ಧೈರ್ಯ ಮತ್ತು ಸಾಹಸವನ್ನು ಬೇಡುತ್ತದೆ. ಎದೆಯೊಳಗಿನ ಹೋರಾಡುವ ಕಿಚ್ಚು ಜೋರಾಗಿ ಉರಿಯಬೇಕಾಗುತ್ತದೆ. ಇರುವ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಕೊನೆಯ ಉಸಿರಿನವೆರೆಗೂ ತಲೆಬಾಗಲಾರೆ ಎಂಬ ಕಠೋರ ನಿಲುವುತಳೆಯುವುದಕ್ಕೂ ಗುಂಡಿಗೆ ಗಟ್ಟಿಯಿರಬೇಕಾಗುತ್ತದೆ. ನಮ್ಮ ಯೋಧರು ಈ ಸಾಲಿಗೆ ಸೇರಿದವರು ಎಂಬುದು 1962ರಲ್ಲಿ ಚೀನಾದೊಂದಿಗೆ ಮಾಡಿದ ಯುದ್ಧದಿಂದಲೇ ನಮಗೆ ತಿಳಿಯುತ್ತದೆ. ಅಂದು, ಅದಾಗಲೇ ವರ್ಷಗಳ ಹಿಂದಿನಿಂದಲೇ ತಯಾರಿ ನಡೆಸಿದ್ದ ಚೀನಾ ಭಾರತದ ಗಡಿ ದಾಟಿ ಒಳಬಂದಾಗ ನಮ್ಮ ಸೈನಿಕರು ತೋರಿದ ಅಪ್ರತಿಮ ಸಾಹಸವನ್ನು ತಿಳಿದರೆ ನಿಮಗೆ ಆ ಸೋಲಿನ ಹತಾಶೆ ಆವರಿಸಿಕೊಳ್ಳುವುದಿಲ್ಲ.
1962ರಲ್ಲಿ ನಡೆದ ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆಯಂತೆ ಉಳಿದುಕೊಳ್ಳುವ ಚೀನಾ ಯುದ್ಧದಲ್ಲಿ ಭಾರತವು ಹೀನಾಯವಾಗಿ ಸೋತಿತ್ತು ಎಂಬುದು ನಿಜವೇ ಆದರೂ, ಆ ಸೋಲಿಗೆ ಕಾರಣವಾಗಿದ್ದು ನಮ್ಮ ಸೈನಿಕರಲ್ಲಿದ್ದ ಕೊರತೆಯಲ್ಲ, ಬದಲಾಗಿ ನಮ್ಮ ನಾಯಕತ್ವದಲ್ಲಿದ್ದ ಮೈಮರೆವು ಎಂಬುದು ನಿಮಗೆ ಅರ್ಥವಾಗೋದು ಯಾವಾಗ ಎಂದರೆ, ಯುದ್ಧದಲ್ಲಿ ಶತ್ರುವಿಗೆ ಎದೆಯೊಡ್ಡಿದವರು ಬರೆದಿಟ್ಟ, ಶತ್ರುವಿನೊಂದೊಗೆ ಹೋರಾಡುವ ಛಾತಿಯಿದ್ದರೂ ಸರಿಯಾದ ಶಸ್ತ್ರಾಸ್ತ್ರ, ಮದ್ದುಗುಂಡುಗಳೇ ಇಲ್ಲದೇ ಶತ್ರುವಿನಿಂದ ಬಂಧಿತರಾಗಿ ʼಯುದ್ಧಖೈದಿʼಗಳಾಗಿ ಸೆರೆಸಿಕ್ಕಿ ವಾಪಸ್ಸು ಬಂದರವು ದಾಖಲಿಸಿರೋ ಅಂಶಗಳನ್ನು ಅವಲೋಕಿಸಿದಾಗ. ಅಂತಹ ಯೋಧರುಗಳ ಪೈಕಿ ಸುಬೇದಾರ್ ಜೋಗಿಂದರ್ ಸಿಂಗ್ ಎಂಬ ಹೆಸರು ಇಂದಿಗೂ ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಾಗದೇ ಉಳಿದವುಗಳಲ್ಲೊಂದು.
ಹುಟ್ಟಿದ್ದು 1921 ನೇ ಇಸವಿಯಲ್ಲಿ. ಪಂಜಾಬಿನ ಮೊಗಾ ಜಿಲ್ಲೆಯ ಮಹಾಕಲನ್ ಹಳ್ಳಿಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಜೋಗಿಂದರ್ ಸಿಂಗ್ ಆಮೇಲೆ 1936ರಲ್ಲಿಯೇ ಬ್ರಿಟೀಷ್ ಇಂಡಿಯನ್ ಆರ್ಮಿಯನ್ನು ಸೇರಿ ಜಗತ್ತಿನಾದ್ಯಂತ ಹೆಸರುಗಳಿಸಿದ್ದ ʼಸಿಖ್ ರೆಜಿಮೆಂಟ್ʼ ನ ಭಾಗವಾಗುತ್ತಾರೆ. ನಂತರ 1940ರ ಸಮಯದಲ್ಲಿ ಎರಡನೇ ವಿಶ್ವಯುದ್ಧ ಭಾಗವಾಗಿ ಭಾರತೀಯ ಸೇನೆಯೂ ಭಾಗವಹಿಸಿದಾಗ ಬರ್ಮಾ ಭಾಗದಲ್ಲಿ ಹೋರಾಡುತ್ತಾನೆ. ಭಾರತ ಸ್ವಾತಂತ್ರ್ಯ ಪಡೆದ ನಂತರ 1947-48ರ ಭಾರತ ಪಾಕಿಸ್ತಾನ ಯುದ್ಧದಲ್ಲಿಯೂ ಹೋರಾಡಿ ನಂತರದಲ್ಲಿ ಭಾರತೀಯ ಸೇನೆಯಲ್ಲಿ ಒಂದು ಘಟಕದ ತರಬೇತುದಾರರಾಗಿ (Unit instructor) ಆಗಿಯೂ ಸೇವೆ ಸಲ್ಲಿಸುತ್ತಾರೆ. ತಮ್ಮ ಅತ್ಯಂತ ಶಿಸ್ತಿನ ಜೀವನಶೈಲಿಯಿಂದ ಭಾರತೀಯ ಸೇನೆಯ ಸಿಖ್ ರೆಜಿಮೆಂಟಿನಲ್ಲಿ ವಿಶೇಷ ಗೌರವವನ್ನೂ ಗಳಿಸುತ್ತಾರೆ.
ಅದು 1962ರ ಸಮಯ, ಚೀನಿ ಸೈನಿಕರು ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ ಎಂಬುದು ಕೊನೆಗೂ ಅರಿವಾಗಿ ಭಾರತೀಯ ನಾಯಕರೆನಿಸಿಕೊಂಡವರು ʼಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆʼ ಶತ್ರುವನ್ನು ಎದುರಿಸಲು ಸಜ್ಜಾಗುವಂತೆ ಆದೇಶಿಸಿತ್ತು. ಆದರೆ ಅದುವರೆಗೂ ಇಂಥದ್ದೊಂದು ಸನ್ನಿವೇಶ ಬರಬಹುದೆಂಬ ಕುರಿತೂ ಯೋಚಿಸಿಯೇ ಇರದವರು ಏಕಾಏಕಿ ಯುದ್ಧಕ್ಕೆ ಅಣಿಯಾಗುವ ಭರದಲ್ಲಿ ಕೆಲ ತಪ್ಪು ನಿರ್ಧಾರಗಳನ್ನೂ ತೆಗೆದುಕೊಂಡಿದ್ದರು. ನಮ್ಮ ಸೇನೆಯಲ್ಲಿ ಅನುಭವಿ ಯೋಧರಿದ್ದಾರೆ ಎಂಬುದು ಹೌದಾದರೂ ಸೇನೆಯ ಯಾವ ಭಾಗವನ್ನು ಎಲ್ಲಿ ನಿಯೋಜಿಸಬೇಕೆಂಬ ಜಾಣ್ಮೆಯ ಕೊರತೆಯಿಂದಾಗಿ ಸಿಖ್ ರೆಜಿಮೆಂಟನ್ನು ಕಠೋರ ಹಿಮಚ್ಛಾದಿತ ಅತ್ಯಂತ ದುರ್ಗಮ ಪರ್ವತ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಹಾಗಂದ ಮಾತ್ರಕ್ಕೆ ಸಿಖ್ಖರಿಗೆ ಹೋರಾಡಲು ಬರುವುದಿಲ್ಲ ಎಂದಲ್ಲ. ಸಿಖ್ಖರ ಕ್ಷಾತ್ರ ತೇಜವನ್ನು ಇಡೀಯ ಜಗತ್ತೇ ಗೌರವಿಸುತ್ತದೆ. ಆದರೆ ಈಗ ಅರುಣಾಚಲ ಪ್ರದೇಶದಲ್ಲಿರುವ ನಾರ್ಥ್ ಈಸ್ ಫ್ರಂಟಿಯರ್ (NEFA)ನ ಗಡಿಗೆ ಕಳುಹಿಸುವ ಮೊದಲು ಅವರಿಗೆ ಹಿಮಚ್ಛಾದಿತ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುವ ತರಬೇತಿಯನ್ನು ನೀಡಬೇಕಿತ್ತು ಎಂಬರ್ಥದಲ್ಲಿ ಬ್ರಿಗೇಡಿಯರ್ ಜಾನ್ ಪಿ.ದಳವಿ ತಮ್ಮ ʼಹಿಮಾಲಯನ್ ಬ್ಲಂಡರ್ʼ ಪುಸ್ತಕದಲ್ಲಿ ಬರೆದಿದ್ದಾರೆ.
ಹೀಗೆ ನಾರ್ಥ್ ಈಸ್ ಫ್ರಂಟಿಯರ್ (NEFA)ಭಾಗದ ತವಾಂಗ್ ಪ್ರದೇಶದ ತಾಂಗ್‌ಪೆನ್ ಲಾ ಪ್ರದೇಶಕ್ಕೆ ನಿಯೋಜನೆಗೊಂಡ ಸಿಖ್ ಸೇನೆಯ ಭಾಗವಾಗಿ ಸುಬೇದಾರ್ ಜೋಗಿಂದರ್ ಸಿಂಗ್ ಕೂಡ ಹೋಗಿದ್ದರು. ಒಂದು ಪ್ಲಟೂನ್ ಅನ್ನು ಮುನ್ನಡೆಸುವ ಜವಾಬ್ದಾರಿ ಅವರಿಗೆ ನೀಡಲಾಗಿತ್ತು. ಚೀನೀ ಸೈನಿಕರಿಗೆ ಮುಂದೆಬರಬೇಡಿ ಎಂದು ಗಡಿಬಿಡಿಯ ಸಂದೇಶಕಳಿಸಲು ಭಾರತೀಯ ನಾಯಕರು ʼಫಾರ್ವರ್ಡ್ ಪಾಲಿಸಿʼಯನ್ನು ಆದೇಶಿಸಿದ್ದರು. ಇದರ ಅನ್ವಯ ಭಾರತೀಯ ಸೈನಿಕರು ಗಡಿಯಲ್ಲಿ ಫಾರ್ವರ್ಡ್ ಪೋಸ್ಟ್‌ಗಳನ್ನು ಸ್ಥಾಪಿಸತೊಡಗಿದ್ದರು. ಮಿಲಿಟರಿ ಪರಿಭಾಷೆಯಲ್ಲಿ ಫಾರ್ವರ್ಡ್ ಪೋಸ್ಟ್‌ಗಳನ್ನುಸ್ಥಾಪಿಸುವುದೆಂದರೆ ಶತ್ರುವಿಗೆ ನೇರವಾಗಿ ಯುದ್ಧಾಹ್ವಾನವಿಟ್ಟಂತೆ.
ಅದಾಗಲೇ ಮೂರು ವರ್ಷದಿಂದ ತಯಾರಿ ನಡೆಸಿದ್ದ ಚೀನಿ ಸೈನಿಕರು 1962ರ ಅಕ್ಟೋಬರ್ 23ರಂದು ಬೆಳಿಗಿನ ಜಾವ 5.30ಕ್ಕೆ, ಸೇನೆಯ ಅಡುಗೆಮನೆಯಲ್ಲಿ ಟೀ ತಯಾರಾಗುವ ಹೊತ್ತಿಗೆ ದಾಳಿ ಇಟ್ಟಿದ್ದರು. ನಮ್ಮ ಸೈನಿಕರ ಬಳಿ ಅವರ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಅಗತ್ಯವಿರುವ ಆಧುನಿಕ ಉಪಕರಣಗಳು ಇರಲಿಲ್ಲ. ಅದು ಹೋಗಲಿ ಅಪಾರ ಪ್ರಮಾಣದಲ್ಲಿ ಶತ್ರುಸೈನ್ಯ ಬಂದರೆ ಸಾಕಾಗುವಷ್ಟು ಗುಂಡುಗಳೂ ಇರಲಿಲ್ಲ. ಆದರೆ ಇದನ್ನೆಲ್ಲ ನೆನೆದುಕೊಳ್ಳುತ್ತ ಶತ್ರುವನ್ನು ಹಿಮ್ಮೆಟ್ಟಿಸದೇ ಕೈಯೆತ್ತಿ ಕೂರುವುದಕ್ಕಾಗುತ್ತದಾ? ಅವ ಮುಂದಡಿಯಿಡದಂತೆ ಮಾಡಲೇಬೇಕು ಎನ್ನುತ್ತ ಜೋಗಿಂದರ್ ಸಿಂಗ್ ತಮ್ಮ ಪಡೆಗಳೊಂದಿಗೆ ಹೋರಾಟಕ್ಕೆ ಅಣಿಯಾದರು. ತಮ್ಮ ಜತೆಗಾರರು ಭಯದಿಂದ ಯುದ್ಧವಿಸ್ಮೃತಿಗೆ ಒಳಗಾಗದಂತೆ ಅವರಿಗೆ ಹುರಿದುಂಬಿಸಿ ಹೋರಾಡಲು ಪ್ರೇರೆಪಣೆ ತುಂಬಿದರು.
ಶತ್ರು ಸೈನಿಕರು ಅವರಿಗಿಂತ ಅಪಾರ ಸಂಖ್ಯೆಯಲ್ಲಿದ್ದರು. ಅವರ ಅತ್ಯಾಧುನಿಕ ಗನ್ನುಗಳು ವೇಗವಾಗಿ ದಾಳಿ ನಡೆಸುತ್ತಿದ್ದರೆ ಜೋಗಿಂದರ್ ಸಿಂಗ್ ಮತ್ತವರ ಸೈನಿಕರು ಇರುವ ಬಂದೂಕಿನಲ್ಲೇ ಶತ್ರು ಸೈನಿಕರಿಗೆ ಅಪಾರ ಹಾನಿಯುಂಟುಮಾಡಿದರು. ಪರಿಣಾಮ ಮೊದಲನೇ ಅಲೆಯಲ್ಲಿ ಶತ್ರುಗಳಿಗೆ ಹಿನ್ನಡೆಯಾಗಿತ್ತು. ಇನ್ನಷ್ಟು ಸಾಮರ್ಥ್ಯದೊಂದಿಗೆ ಶತ್ರುವು ಎರಡನೇ ಅಲೆಯಲ್ಲಿ ದಾಳಿ ನಡೆಸಿದಾಗ ಜೋಗಿಂದರ್ ಸಿಂಗ್ ಜತೆಯಲ್ಲಿದ್ದ ಅನೇಕ ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದರು. ಇವರ ಬಳಿಯಿದ್ದ ಮದ್ದುಗುಂಡುಗಳು ಮುಗಿಯುತ್ತ ಬಂದಿದ್ದವು. ಚೀನಿ ಸೈನಿಕರ ಮೂರನೇ ಅಲೆಯ ದಾಳಿಯ ಹೊತ್ತಿಗೆ ಜೋಗೀಂದರ್ ಸಿಂಗ್ ಮತ್ತವರ ಜತೆಯಲ್ಲಿದ್ದ ಕೆಲವೇ ಕೆಲವು ಸೈನಿಕರು ಅಸಹಾಯಕ ಸ್ಥಿತಿಗೆ ತಲುಪಿದ್ದರು. ಆದರೆ ಶತ್ರುವಿನ ಎದುರು ಶರಣಾಗುವ ಮಾತೇ ಇಲ್ಲ. ʼಜೋ ಬೋಲೇ ಸೋ ನಿಹಾಲ್.. ಸತ್ ಶ್ರೀ ಅಕಾಲ್ʼ ಎಂಬ ತಮ್ಮ ಯುದ್ಧಘೋಷ ಮೊಳಗಿಸಿದ ಜೋಗಿಂದರ್ ಸಿಂಗ್ ತಮ್ಮ ಬಂದೂಕಿನ ತುದಿಯಲ್ಲಿದ್ದ ಚಾಕುವಿನಿಂದಲೇ ಶತ್ರುವಿನ ಮೇಲೆ ದಾಳಿ ಮಾಡ ತೊಡಗಿದರು. ಕೈಯಲ್ಲಿ ಅತ್ಯಾಧುನಿಕ ಬಂದೂಕು ಹಿಡಿದಿರುವ ಶತ್ರು ಹೀಗೆ ದಾಳಿ ಮಾಡಿದಾಗ ಆತನ ಮೇಲೆ ಕೇವಲ ಚಾಕುವಿನಿಂದ ದಾಳಿ ಮಾಡುತ್ತಾರೆಂದರೆ ಅವರಿಗಿದ್ದ ಛಾತಿ ಎಂಥಹದ್ದಿರಬೇಡ. ಅವರಿಂದ ಪ್ರೇರಣೆ ಪಡೆದ ಅವರ ಜತೆಗಾರರೂ ಕೂಡ ಅವರಂತೆಯೇ ಹೋರಾಟ ನಡೆಸಿದರು. ಶತ್ರು ಸೈನ್ಯಕ್ಕೆ ಭಾರೀ ಹಾನಿಯಾಗಿತ್ತು. ಆದರೆ ಕೊನೆಗೆ ಅಪಾರ ಸಂಖ್ಯೆಯಲ್ಲಿ ಬಂದ ಶತ್ರುಗಳ ವಿರುದ್ಧ ಹೋರಾಡುತ್ತಲೇ ಜೋಗಿಂದರ್ ಅವರಿಂದ ಬಂಧಿಸಲ್ಪಟ್ಟರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಜೋಗಿಂದರ್ ಸಿಂಗ್ ಅಲ್ಲಿಯೇ ಕೊನೆಯುಸಿರೆಳೆದರು.
ಜೋಗಿಂದರ್ ಸಿಂಗ್ ಅವರ ಕರ್ತವ್ಯ ನಿಷ್ಠೆ, ಅತ್ಯುತ್ತಮ ನಾಯಕತ್ವ, ಅಪ್ರತಿಮ ಶೌರ್ಯಕ್ಕಾಗಿ ಅವರಿಗೆ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರಿಗೆ ಪರಮವೀರ ಚಕ್ರದ ನೀಡುತ್ತಿರವ ಕುರಿತು ತಿಳಿದ ನಂತರ ಚೀನಿಯರು ಅವರು ಚಿತಾಭಸ್ಮವನ್ನು ಹಿಂತಿರುಗಿಸಿದರು. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಹೆಸರಿಡುವ ಮೂಲಕ ಅವರಿಗೆ ಗೌರವ ಸಮರ್ಪಿಸಲಾಗಿದೆ. ಅವರು ತಮ್ಮ ಅತ್ಯುತ್ತಮ ಶೌರ್ಯದಿಂದಾಗಿ ರಾಷ್ಟ್ರದ ಇತಿಹಾಸದಲ್ಲಿ ಅಮರರಾಗಿ ಉಳಿದುಹೋಗಿದ್ದಾರೆ.