ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು: ಆರೆಸ್ಸೆಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿನಿಧಿ ಸಭೆಯ ಸಭೆಯಲ್ಲಿ ಬಾಂಗ್ಲಾದೇಶದ ಹಿಂದುಗಳೊಂದಿಗೆ ಒಗ್ಗಟ್ಟನ್ನು ತೋರಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಬಾಂಗ್ಲಾದೇಶದ ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳು ಅಲ್ಲಿನ ಮೂಲಭೂತವಾದಿ ಇಸ್ಲಾಮಿಕ್ ಶಕ್ತಿಗಳಿಂದ ಎದುರಿಸುತ್ತಿರುವ ನಿರಂತರವಾದ ಮತ್ತು ಯೋಜನಾಬದ್ಧ ರೀತಿಯಲ್ಲಿ ನಡೆಯುತ್ತಿರುವ ಹಿಂಸಾಚಾರ, ಅನ್ಯಾಯ ಮತ್ತು ದಬ್ಬಾಳಿಕೆಗಳ ಕುರಿತು ಅಖಿಲ ಭಾರತೀಯ ಪ್ರತಿನಿಧಿ ಸಭಾ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ .

ಬಾಂಗ್ಲಾದೇಶದ ಇತ್ತೀಚಿನ ಆಡಳಿತ ಬದಲಾವಣೆಯ ಸಂದರ್ಭ ಮಠಗಳು, ದೇವಸ್ಥಾನಗಳು, ದುರ್ಗಾಪೂಜಾ ಪೆಂಡಾಲುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೇಲಿನ ದಾಳಿ, ದೇವರ ಪ್ರತಿಮೆಗಳನ್ನು ವಿರೂಪಗೊಳಿಸುವುದು, ಬರ್ಬರ ಹತ್ಯೆಗಳು, ಆಸ್ತಿಪಾಸ್ತಿ ದರೋಡೆ, ಮಹಿಳೆಯರ ಅಪಹರಣ ಮತ್ತು ಅತ್ಯಾಚಾರ, ಬಲವಂತದ ಮತಾಂತರ ಮೊದಲಾದ ಅನೇಕ ಘಟನೆಗಳು ನಿರಂತರ ವರದಿಯಾಗುತ್ತಲಿವೆ. ಈ ಎಲ್ಲ ಘಟನೆಗಳ ಮತೀಯ ಆಯಾಮವನ್ನು ನಿರಾಕರಿಸುವುದು ಮತ್ತು ಅವು ಕೇವಲ ರಾಜಕೀಯ ಪ್ರೇರಿತ ಎಂದು ಸಾಧಿಸುವುದು ಸತ್ಯದ ನಿರಾಕರಣೆಯೇ ಆಗಿದೆ, ಏಕೆಂದರೆ ಅಂತಹ ಘಟನೆಗಳಿಗೆ ಬಲಿಯಾದವರು ಬಹುತೇಕ ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಸ್ಲಿಂ ಮತಾಂಧರಿoದ ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಹೊಸದೇನಲ್ಲ. ಬಾಂಗ್ಲಾದೇಶದದಲ್ಲಿ ಹಿಂದು ಜನಸಂಖ್ಯೆಯ ನಿರಂತರ ಇಳಿತ ಅವರ ಅಸ್ತಿತ್ವದ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತದೆ . ಆದರೆ ಕಳೆದ ವರ್ಷ ಕಂಡ ಈ ಹಿಂಸಾಚಾರ ಮತ್ತು ದ್ವೇಷಕ್ಕೆ ಸರ್ಕಾರ ಮತ್ತು ಸಂಸ್ಥೆಗಳಿಂದ ಸಿಕ್ಕ ಬೆಂಬಲ ತೀವ್ರ ಕಳವಳಕಾರಿಯಾಗಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಭಾರತ ವಿರೋಧಿ ಧೋರಣೆ ಎರಡೂ ದೇಶಗಳ ನಡುವಿನ ಸಂಬoಧವನ್ನು ತೀವ್ರವಾಗಿ ಹಾನಿಗೊಳಿಸಬಹುದಾಗಿದೆ ಎಂದು ಸಭಾ ಹೇಳಿದೆ .

ಹೀಗಾಗಿ ಭಾರತ ವಿರೋಧಿ ವಾತಾವರಣ, ಪಾಕಿಸ್ತಾನ ಮತ್ತು ‘ಡೀಪ್ ಸ್ಟೇಟ್’ ಶಕ್ತಿಗಳ ಸಕ್ರಿಯತೆಯ ಮೇಲೆ ದೃಷ್ಟಿಯಿರಿಸಬೇಕು ಮತ್ತು ಅವುಗಳನ್ನು ಬಹಿರಂಗಪಡಿಸಬೇಕು ಎಂದು ಚಿಂತನಶೀಲ ವರ್ಗ ಮತ್ತು ಅಂತಾ ರಾಷ್ಟ್ರೀಯ ವಿಷಯಗಳ ವಿಶೇಷಜ್ಞರಲ್ಲಿ ಪ್ರತಿನಿಧಿ ಸಭಾ ಆಗ್ರಹಿಸಿದೆ .

ಭಾರತ ಸಂಪೂರ್ಣ ಪ್ರದೇಶವು ಸಮಾನ ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಸಂಬoಧವನ್ನು ಹೊಂದಿದೆ. ಹಾಗಾಗಿ ಒಂದು ಭಾಗದಲ್ಲಿ ಉಂಟಾಗುವ ತಳಮಳಗಳು ಇಡೀ ಪ್ರದೇಶದಲ್ಲಿ ಪ್ರಭಾವನ್ನು ಬೀರುತ್ತವೆ.ಆದ್ದರಿಂದ ಭಾರತ ಮತ್ತು ನೆರೆಹೊರೆಯ ದೇಶಗಳ ಈ ಸಮಾನ ಪರಂಪರೆಯನ್ನು ಬಲಪಡಿಸಲು ಪ್ರಯತ್ನಿಸಬೇಕೆಂದು ಪ್ರತಿನಿಧಿ ಸಭಾ ಹೇಳಿದೆ.

ಬಾಂಗ್ಲಾದೇಶದ ಹಿಂದು ಸಮುದಾಯವು ಈ ದೌರ್ಜನ್ಯವನ್ನು ಶಾಂತಿಯುತ, ಒಗ್ಗಟ್ಟಿನ ಮತ್ತು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಎದುರಿಸಿದೆ. ಆ ಕ್ಷಣ ಭಾರತ ಮತ್ತು ವಿಶ್ವದೆಲ್ಲೆಡೆಯ ಹಿಂದು ಸಮಾಜ ನೈತಿಕ ಮತ್ತು ಮಾನಸಿಕ ಬೆಂಬಲ ನೀಡಿದೆ. ಭಾರತ ಮತ್ತು ವಿಶ್ವದ ಅನೇಕ ದೇಶಗಳ ಹಿಂದು ಸಂಘಟನೆಗಳು ಹಿಂಸಾಚಾರದ ವಿರುದ್ಧ ಕಳವಳ ವ್ಯಕ್ತಪಡಿಸಿ, ಧ್ವನಿಯನ್ನೆತ್ತಿದವು, ಜೊತೆಗೆ ಬಾಂಗ್ಲಾದೇಶದ ಹಿಂದುಗಳ ಭದ್ರತೆ ಮತ್ತು ಗೌರವದ ರಕ್ಷಣೆಯನ್ನು ಆಗ್ರಹಿಸಿತ್ತು.

ಇದೀಗ ಬಾಂಗ್ಲಾದೇಶದ ಹಿಂದು ಸಮುದಾಯದ ಭದ್ರತೆ, ಗೌರವ ಮತ್ತು ಕಲ್ಯಾಣ ರಕ್ಷಣೆಗಾಗಿ ಮತ್ತು ಬಾಂಗ್ಲಾದೇಶದ ಸರ್ಕಾರದೊಂದಿಗೆ ನಿರಂತರ ಮತ್ತು ಅರ್ಥಪೂರ್ಣ ಸಂವಾದವನ್ನು ನಡೆಸುವ ಎಲ್ಲ ಪ್ರಯತ್ನಗಳನ್ನು ನಡೆಸಬೇಕು ಎಂದು ಪ್ರತಿನಿಧಿ ಸಭಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ .

ಜೊತೆಗೆ ವಿಶ್ವಸಂಸ್ಥೆ ಮತ್ತು ವೈಶ್ವಿಕ ಸಮುದಾಯ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪದಾಧಿಕಾರದ ಸ್ಥಾನದಲ್ಲಿರುವವರು ಬಾಂಗ್ಲಾದೇಶದ ಹಿಂದು ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಅಮಾನವೀಯ ವ್ಯವಹಾರವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಂತಹ ಹಿಂಸಾಚಾರದ ಚಟುವಟಿಕೆಗಳನ್ನು ನಿಲ್ಲಿಸಲು ಬಾಂಗ್ಲಾದೇಶದ ಸರ್ಕಾರದ ಮೇಲೆ ಒತ್ತಡ ಹೇರಬೇಕು. ವಿಶ್ವದ ಎಲ್ಲ ದೇಶಗಳ ಹಿಂದು ಸಮುದಾಯ ಮತ್ತು ನಾಯಕರು ಹಾಗೂ ಸಂಸ್ಥೆಗಳು ಬಾಂಗ್ಲಾದೇಶದ ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ನಿರ್ಣಯದಲ್ಲಿ ಹೇಳಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!