ಹೊಸದಿಗಂತ ವರದಿ ಬೆಳಗಾವಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್ ಗೆ ದಿನಗಣನೆ ಆರಂಭವಾಗಿದೆ.
ಬೆಳಗಾವಿಯಲ್ಲಿ ಜುಲೈ 10ರಿಂದ 12ರವರೆಗೆ ನಡೆಯಲಿರುವ ಈ ಪ್ರಚಾರಕರ ಬೈಠಕ್ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚರ್ಚೆ ಈಗ ಇನಾಷ್ಟು ತೀವ್ರಗೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ ಸಂಘದ ಹಿರಿಯ ಪದಾಧಿಕಾರಿಗಳು ಭಾಗವಹಿಸಲಿರುವ ಈ ಸಭೆಗೆ ರಾಜಕೀಯ ವಲಯದಲ್ಲಿಯೂ ವಿಶೇಷ ಗಮನ ಸೆಳೆಯುತ್ತಿದೆ.
ಬೈಠಕ್ ಆಯೋಜನೆ, ಭದ್ರತಾ ವ್ಯವಸ್ಥೆ ಹಾಗೂ ಸರ್ಕಾರದ ಆಡಳಿತಾತ್ಮಕ ಕ್ರಮಗಳ ಕುರಿತು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಮುಂದುವರಿದಿದೆ. ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮದೇ ನಿಲುವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ, ಕೆಲವು ಸಂಘಟನೆಗಳು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಸಭೆಯ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಮತ್ತೊಂದೆಡೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರು ಇದು ಸಂಘಟನೆಯ ಆಂತರಿಕ ಸಭೆಯಾಗಿದ್ದು, ಕಾನೂನುಬದ್ಧವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಹಕ್ಕು ಎಲ್ಲ ಸಂಘಟನೆಗಳಿಗೂ ಇದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:
ಸಭೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಸಭಾ ಸ್ಥಳ, ವಸತಿ ಕೇಂದ್ರಗಳು ಹಾಗೂ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಬೈಠಕ್ ಆರಂಭಕ್ಕೂ ಮುನ್ನವೇ ರಾಜಕೀಯ ಹೇಳಿಕೆಗಳು, ಪ್ರತಿಕ್ರಿಯೆಗಳು ಮತ್ತು ವಿವಿಧ ಸಂಘಟನೆಗಳ ಅಭಿಪ್ರಾಯಗಳು ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಮೂರು ದಿನಗಳ ಕಾಲ ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಪ್ರಮುಖ ವಿಷಯವಾಗಿ ಮುಂದುವರಿಯುವ ಸಾಧ್ಯತೆ ಇದೆ.



