ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿ ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರದಿಂದ ಬಿಸಿಗಾಳಿ ಆವರಿಸಿದ್ದು, ಭಾರತೀಯ ಹವಾಮಾನ ಇಲಾಖೆ ಎರಡು ದಿನ ‘ಯೆಲ್ಲೂ’ ಅಲರ್ಟ್ ಘೋಷಿಸಿದೆ.
ಬುಧವಾರ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದು ಮಾರ್ಚ್ 3 ರವರೆಗೆ ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಾದ್ಯಂತ ಗರಿಷ್ಠ ಉಷ್ಣಾಂಶ 37-39 ಡಿಗ್ರಿ ಸೆಲ್ಸಿಯಸ್ ಇರಲಿದೆ.ಮನುಷ್ಯನ ದೇಹವು 40-50 ಡಿಗ್ರಿ ಸೆಲ್ಸಿಯಸ್ ನಡುವಿನ ಗರಿಷ್ಠ ತಾಪಮಾನವನ್ನು ಸಹಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಬಿಸಿಗಾಳಿ ಇರಲಿದೆಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಧ್ಯವಾದಷ್ಟು ಸೂರ್ಯನ ನೇರ ಬೆಳಕು ಮತ್ತು ಬಿಸಿ ಗಾಳಿಯಿಂದ ತಪ್ಪಿಸಿಕೊಂಡು ತಂಪಾದ ಸ್ಥಳಗಳಲ್ಲಿ ಉಳಿಯಬೇಕು. ಛತ್ರಿ ಇಲ್ಲದೆ ಹೊರಗೆ ಹೋಗಬೇಡಿ. ಸಿಂಥೆಟಿಕ್ ಬಟ್ಟೆಗಳನ್ನು ತ್ಯಜಿಸಿ, ಹತ್ತಿ ಬಟ್ಟೆಗಳನ್ನು ಬಳಸಬೇಕು. ಕಠಿಣ ದೈಹಿಕ ಶ್ರಮವನ್ನು ತಪ್ಪಿಸಿ,ವಿಶ್ರಾಂತಿ ತೆಗೆದುಕೊಳ್ಳಬೇಕು. ನೀರು ಮತ್ತು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಿ, ಬಿಸಿ ಪಾನೀಯಗಳು ಮತ್ತು ಮದ್ಯದ ಸೇವನೆಯಿಂದ ದೂರವಿರಬೇಕು ಎಂದು ಸಲಹೆ ನೀಡಲಾಗಿದೆ.