ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರರಂಗದಲ್ಲಿ ತಂತ್ರಜ್ಞಾನದ ಬೆಳವಣಿಗೆ ಎಷ್ಟು ವೇಗವಾಗಿ ಆಗುತ್ತಿದೆಯೋ, ಅಷ್ಟೇ ವೇಗವಾಗಿ ಅದರ ಕರಾಳ ಮುಖವೂ ಅನಾವರಣಗೊಳ್ಳುತ್ತಿದೆ. ‘ದೇವರ’ ಸಿನಿಮಾದ ‘ಚುಟ್ಟಮಲ್ಲೇ’ ಹಾಡಿನ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಜಾನ್ವಿ ಕಪೂರ್, ಇದೀಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ದುರ್ಬಳಕೆಗೆ ತುತ್ತಾಗಿದ್ದಾರೆ. ಈ ಹಾಡಿನಲ್ಲಿನ ಅವರ ದೃಶ್ಯಗಳನ್ನು ಎಐ ಬಳಸಿ ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು.
ಈ ಸೈಬರ್ ಅಪರಾಧದ ವಿರುದ್ಧ ಜಾನ್ವಿ ಕಪೂರ್ ಮತ್ತು ಅವರ ಸಹನಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಟಾಲಿವುಡ್‌ನ ಹಲವು ಗಣ್ಯರು ಜಾನ್ವಿ ಬೆಂಬಲಕ್ಕೆ ನಿಂತು, ಇಂತಹ ಅಶ್ಲೀಲ ಕೃತ್ಯಗಳನ್ನು ಖಂಡಿಸಿ ವೀಡಿಯೋ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಆದರೆ, ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷಯದಲ್ಲಿ ತೀರಾ ಭಿನ್ನವಾದ ಧೋರಣೆ ತಳೆದಿದ್ದಾರೆ.
ಈ ಕುರಿತು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ವರ್ಮಾ, ಜಾನ್ವಿ ಹೆಸರು ಉಲ್ಲೇಖಿಸದೇ ಸಹಾನುಭೂತಿ ತೋರಿದ ಗಣ್ಯರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. “ಹೀಗೆ ಬಹಿರಂಗವಾಗಿ ಖಂಡಿಸುವುದರಿಂದ ಅಪರಾಧಿಗೆ ಶಿಕ್ಷೆಯಾಗುವುದಿಲ್ಲ, ಬದಲಿಗೆ ಕೋಟ್ಯಂತರ ಜನ ಆ ಅಶ್ಲೀಲ ವೀಡಿಯೋವನ್ನು ಹುಡುಕಿ ನೋಡುವಂತೆ ಪ್ರಚಾರ ಸಿಕ್ಕಂತಾಗುತ್ತದೆ. ಸಂತ್ರಸ್ತರ ಗುರುತನ್ನು ರಟ್ಟು ಮಾಡುವ ಬದಲು, ಸದ್ದಿಲ್ಲದೆ ಆರೋಪಿಯನ್ನು ಹಿಡಿದು ಶಿಕ್ಷಿಸುವುದು ಬುದ್ಧಿವಂತಿಕೆ. ವೀಡಿಯೋಗೆ ಅನಗತ್ಯ ಪ್ರಚಾರ ನೀಡುವುದು ಕೂಡ ಒಂದು ರೀತಿಯ ಅಪರಾಧವೇ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ತಂತ್ರಜ್ಞಾನದ ಭವಿಷ್ಯದ ಬಗ್ಗೆ ಮಾತನಾಡಿದ ಅವರು, “ಕೃತಕ ಬುದ್ಧಿಮತ್ತೆಯನ್ನು ಸೋಲಿಸಲು ಸಾಧ್ಯವಿಲ್ಲದಿದ್ದಾಗ ಅದರೊಂದಿಗೆ ಹೆಜ್ಜೆ ಹಾಕುವುದು ಒಳಿತು. ಎಐ ವಿರುದ್ಧ ಹೋರಾಡಲು ಹೋದರೆ ಅದು ನಿಮ್ಮ ಅಸ್ತಿತ್ವವನ್ನೇ ಅಳಿಸಿಹಾಕುತ್ತದೆ,” ಎಂದು ಎಚ್ಚರಿಸಿದ್ದಾರೆ.
ವರ್ಮಾ ಅವರ ಈ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿವೆ. ಎಐ ತಂತ್ರಜ್ಞಾನದ ಕರಾಳ ನೆರಳು ಚಿತ್ರರಂಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಖಾಸಗಿತನ ಮತ್ತು ನೈತಿಕತೆಯ ರಕ್ಷಣೆಗೆ ಕಠಿಣ ಸೈಬರ್ ಕಾಯ್ದೆಗಳ ಅಗತ್ಯವಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.



