ಹೊಸದಿಗಂತ ವರದಿ ಅಂಕೋಲಾ :
ಅಂಕೋಲಾ ತಾಲೂಕಿನ ಹಾರವಾಡ ಮತ್ತು ಬೆಳಂಬಾರಗಳಲ್ಲಿ ನಡೆಸಲಾದ ಪ್ರತ್ಯೇಕ ಅಬಕಾರಿ ದಾಳಿಯಲ್ಲಿ ಸುಮಾರು 456 ಲೀಟರ್ ಅಕ್ರಮ ಗೋವಾ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ಹಾರವಾಡ ಸೀಬರ್ಡ್ ಕಾಲನಿ ಗ್ರಾಮ ಪಂಚಾಯತ್ ರಸ್ತೆಯ ಚರಂಡಿ ಕೆಳಭಾಗದಲ್ಲಿ ಸಂಗ್ರಹಿಸಿಟ್ಟ ಸುಮಾರು 2.42 ಲಕ್ಷ ರೂಪಾಯಿ ಮೌಲ್ಯದ 345.6 ಲೀಟರ್ ಗೋವಾ ಸಾರಾಯಿ ಮತ್ತು 80 ಲೀಟರ್ ಗೋವಾ ಫೆನ್ನಿ ಅನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸಂಗ್ರಹಿಸಿಟ್ಟ ಆರೋಪಿಯ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಅದೇ ರೀತಿ ತಾಲೂಕಿನ ಬೆಳಂಬಾರ ಗ್ರಾಮದ ಮಧ್ಯ ಖಾರ್ವಿವಾಡಾದಲ್ಲಿ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ ಸುಮಾರು 16 ಸಾವಿರ ರೂಪಾಯಿ ಮೌಲ್ಯದ 31 ಲೀಟರ್ ಗೋವಾ ಫೆನ್ನಿ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ಲತಾ ಸುರೇಶ ಖಾರ್ವಿ ತಪ್ಪಿಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ಅವರ ನೇತೃತ್ವದಲ್ಲಿ ಎರಡೂ ದಾಳಿಗಳನ್ನು ನಡೆಸಲಾಗಿದ್ದು, ಸಿಬ್ಬಂದಿಗಳಾದ ಈರಣ್ಣ ಕುರುಬೇಟ, ಶ್ರೀಶೈಲ ಹಡಪ, ಗಿರೀಶ್ ಅಟವಾಲೆ ವಾಹನ ಚಾಲಕ ವಿನಾಯಕ ನಾಯ್ಕ ಪಾಲ್ಗೊಂಡಿದ್ದರು.