ಹೊಸದಿಗಂತ ವರದಿ ಮಡಿಕೇರಿ :
ಒಕ್ಕಲಿಗ ಸಮುದಾಯದ ವಿರುದ್ಧ ಪ್ರೊ. ಕೆ.ಎಸ್.ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮತ್ತು ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮಡಿಕೇರಿ ತಾಲೂಕು ಒಕ್ಕಲಿಗರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಪ್ರೊ. ಕೆ.ಎಸ್.ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಸಂಘದ ಕಾನೂನು ಸಲಹೆಗಾರ ಎಂ.ಎ.ನಿರಂಜನ್ ಮಾತನಾಡಿ, ಭಗವಾನ್ ಅವರು ತಮ್ಮ ಭಾಷಣದಲ್ಲಿ ಒಂದು ಸಮುದಾಯವನ್ನು ಅವಹೇಳನ ಮಾಡಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆಯೂ ಇದೇ ರೀತಿ ಮಾಡಲಾಗಿದೆ, ಇದನ್ನು ಹೀಗೆ ಮುಂದುವರೆಯಲು ಬಿಟ್ಟರೆ ಸಂಘರ್ಷಕ್ಕೆ ದಾರಿ ಮಾಡಿದಂತಾಗುತ್ತದೆ. ಆದ್ದರಿಂದ ಪ್ರೊ. ಭಗವಾನ್’ರನ್ನು ಬಂಧಿಸಿ ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಶಾಂತಿಯುತವಾಗಿದ್ದ ಒಕ್ಕಲಿಗರ ಮನಸ್ಸನ್ನು ಕೆರಳಿಸಿದ್ದಾರೆ, ಒಬ್ಬ ವ್ಯಕ್ತಿ ಕೇವಲ ವಿದ್ಯಾವಂತರಾದರೆ ಸಾಲದು, ಪ್ರಜ್ಞಾವಂತರಾಗಿರಬೇಕು. ಆದರೆ, ಇವರಲ್ಲಿ ಅಂತಹ ಪ್ರಜ್ಞಾವಂತಿಕೆ ಇಲ್ಲವೆಂಬುದಕ್ಕೆ ಇವರ ಹೇಳಿಕೆಯೇ ಸಾಕ್ಷಿಯಾಗಿದೆ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಡಿಕೇರಿ ತಾಲೂಕು ಅಧ್ಯಕ್ಷ ಮೋಹನ್ ವಿ.ಜಿ, ಕಾರ್ಯದರ್ಶಿ ಕುಶಾಲಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಬಸವರಾಜು, ಖಜಾಂಚಿ ಕೆ.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ನಿರ್ದೇಶಕರಾದ ಉಮೇಶ್ ಗೌಡ, ಮಂಜುನಾಥ್, ದೇವೇಂದ್ರ, ಬಿ.ಡಿ.ಮಂಜುನಾಥ್, ಎಂ.ಧನಂಜಯ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.