ಹೊಸದಿಗಂತ ವರದಿ ಶಿವಮೊಗ್ಗ:
ರಾಜ್ಯದಲ್ಲೇ ಮೈಸೂರು ನಂತರ ಎರಡನೇ ವೈಭವದ ದಸರಾಕ್ಕೆ ಹೆಸರಾಗಿರುವ ಶಿವಮೊಗ್ಗ ದಸರಾ ಆಚರಣೆಗೆ ರಾಜ್ಯ ಸರ್ಕಾರ ಕೇವಲ 20 ಲಕ್ಷ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರಕ್ಕೆ ಇಷ್ಟು ಬಡತನ ಬಂದಿದ್ದರೆ ಹಣ ಕೊಡುವುದೇ ಬೇಡವಾಗಿತ್ತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕುಟುಕಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಶಿವಮೊಗ್ಗ ದಸರಾ ವೈಭವಕ್ಕೆ ಇಲ್ಲಿವರೆಗೆ ಎಲ್ಲಾ ಸರ್ಕಾರಗಳೂ ಅನುದಾನ ನೀಡುತ್ತಾ ಬಂದಿವೆ. ಹಿಂದಿನ ಸರ್ಕಾರಗಳು 1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹಣ ನೀಡಿವೆ. ಆದರೆ ಈಗಿನ ಸರ್ಕಾರ ಕೇವಲ 20 ಲಕ್ಷ ರೂ. ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಇಷ್ಟು ಬಡತನ ಬಂದಿದ್ದನ್ನು ಹೇಳಿದ್ದರೆ ಇಲ್ಲಿನ ನಾಗರೀಕರಿಂದಲೇ 1 ಕೋಟಿ ರೂ. ಹಣ ಸಂಗ್ರಹ ಮಾಡಿ ದಸರಾ ಆಚರಣೆ ಮಾಡುತ್ತಿದ್ದೆವು. ರಾಜ್ಯ ಸರ್ಕಾರ ಇಷ್ಟು ದಿವಾಳಿ ಆಗಲು ಗ್ಯಾರಂಟಿ ಯೋಜನೆಗಳೇ ಕಾರಣ. 15 ಬಾರಿ ಬಜೆಟ್ ಮಂಡನೆ ಮಾಡಿದ ಛಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಇದೆಲ್ಲಾ ಗೊತ್ತಿರಲಿಲ್ಲವೇ ಎಂದು ಕುಟುಕಿದರು.